ಜಿಲ್ಲಾ ಕುರುಬರ ಸಂಘದ ಚುನಾವಣೆ ನಾಲ್ಕು ನಾಮಪತ್ರ ತಿರಸ್ಕೃತ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.22: ಜಿಲ್ಲಾ ಕುರುಬರ ಸಂಘದ 31 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು. ನಾಮಪತ್ರ ಸಲ್ಲಿಸಿದ್ದ 88 ಜನರ ಪೈಕಿ ನಾಲ್ವರ ನಾಮಪತ್ರಗಳು ತಿರಸ್ಕೃತಗೊಂಡಿವೆ.
ಸಂಘದ ಕಚೇರಿಯಲ್ಲಿ ಇಂದು ಚುನಾವಣಾಧಿಕಾರಿ ಜೆ.ಎಂ.ನಾಗರಾಜ, ಸಹಾಯಕ ಚುನಾವಣಾಧಿಕಾರಿ ಬಿ.ಮಾರೆಪ್ಪ ನಾಮಪತ್ರಗಳನ್ನು ಪರಿಶೀಲನೆ ಮಾಡಿ, ನಾಲ್ವರ ನಾಮಪತ್ರ ತಿರಸ್ಕರಿಸಿದ್ದಾರೆ. ನಾಳೆ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ.  ಸ್ಪರ್ಧೆ ಏರ್ಪಟ್ಟರೆ ಅ 29 ರಂದು ನಗರದ ಹೊಸ ಬಸ್ ನಿಲ್ದಾಣದ ಎದುರಿನಲ್ಲಿರುವ ವೀರಶೈವ ವಿದ್ಯಾವರ್ಧಕ ಸಂಘದ  ಹೀರದ ಸೂಗಮ್ಮ ಶಾಲೆಯಲ್ಲಿ
ಮತದಾನ ಬೆಳಿಗ್ಗೆ 9 ರಿಂದ ಸಂಜೆ  4 ವರೆಗೆ ನಡೆಯಲಿದ್ದು.
ನಂತರ ಮತಗಳ ಎಣಿಕೆ ನಡೆಯಲಿದೆ. ಅಂದೇ ಬೆಳಿಗ್ಗೆ 8 ಗಂಟೆಗೆ ಸಾಮಾನ್ಯ ಸಭೆ ಕರೆಯಲಾಗಿದೆಂದು ಸಂಘದ ಆಡಳಿತಾಧಿಕಾರಿಯೂ ಆಗಿರುವ,  ಸಹಕಾರ ಇಲಾಖೆಯ  ಸಹಾಯಕ ನಿಬಂಧಕರಾದ ಜಿ.ಎಂ.ವೀರಭದ್ರಯ್ಯ ಹೇಳಿದ್ದಾರೆ.
ನಗರ-ನಗರೇತರ ಸಂಘದಲ್ಲಿ ಬೈಲ ತಿದ್ದುಪಡಿ ಮಾಡಿ ಮೊದಲ ಬಾರಿಗೆ ನಗರ ಮತ್ತು ನಗರೇತರ ಎಂದು ಮಾಡಿದ್ದು. ಬಳ್ಳಾರಿ ನಗರದಿಂದ ಓರ್ವ ಮಹಿಳೆ ಸೇರಿದಂತೆ ಆರು ಜನ‌ನಿರ್ದೇಶಕರನ್ನು 3342 ಜನ‌ಮತದಾರರು ಆಯ್ಕೆ ಮಾಡಬೇಕಿದೆ.
ನಗರೇತರದಲ್ಲಿ ಐದು ಮಹಿಳೆಯರು ಸೇರಿದಂತೆ 25 ಜನ‌ನಿರ್ದೇಶಕರನ್ನು ಬಳ್ಳಾರಿ ತಾಲೂಕಿನ- 850, ಸಿರುಗುಪ್ಪ ತಾಲೂಕಿನ -416, ಕಂಪ್ಲಿ ತಾಲೂಕಿನ -233, ಕುರುಗೋಡು ತಾಲೂಕಿನ -667 ಮತ್ತು ಸಂಡೂರು ತಾಲೂಕಿನ 448 ಜನ‌ಮತದಾರರು ಆಯ್ಕೆ ಮಾಡಬೇಕಿದೆ.
ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾದ ನಿನ್ನೆ ನಗರದ ಆರು ಸ್ಥಾನಗಳಿಗೆ 18 ಜನ ಮತ್ತು ಗ್ರಾಮಿಣದ 25 ಸ್ಥಾನಗಳಿಗೆ 70 ಜನ‌ ನಾಮಪತ್ರ ಸಲ್ಲಿಸಿದ್ದರು.
ನಾಳೆ ಒಂದಿಷ್ಟು ಜನ ನಾಮಪತ್ರ ಹಿಂದಕ್ಕೆ ಪಡೆಯುವ ಸಾಧ್ಯತೆ ಇದೆ. ಇನ್ನು ಗುಂಪುಗಳ ರಚನೆ ಆಗಿಲ್ಲ.  ನಾಡಿದ್ದು ಈ ಬಗ್ಗೆ ಸ್ಪಷ್ಟತೆ ದೊರೆಯಲಿದೆ.