ಜಿಲ್ಲಾ ಕಾರಾಗೃಹದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ, ಚಿಕಿತ್ಸಾ ಆಂದೋಲನ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಕೊಪ್ಪಳ ಜುಲೈ :18 : ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಜುಲೈ 17ರಿಂದ ಆಗಸ್ಟ್ 02ರವೆಗೆ ನಡೆಯಲಿರುವ “ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ” ಉದ್ಘಾಟನೆ ಕಾರ್ಯಕ್ರಮ ಮತ್ತು ಸಮಗ್ರ ಎಸ್.ಟಿ.ಐ., ಹೆಚ್.ಐ.ವಿ ಮತ್ತು ಹೆಪಟೈಟಿಸ್ ಅಭಿಯಾನ ಶಿಬಿರವು ಜುಲೈ 17ರಂದು ಜಿಲ್ಲಾ ಕಾರಾಗೃಹದಲ್ಲಿ ನಡೆಯಿತು.
ಕೊಪ್ಪಳ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳು ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಾದ ಡಾ.ಶಶಿಧರ ಎ ಅವರು ಕಾರ್ಯಕ್ರಮದ ಉದ್ಘಾಟಿಸಿದರು. ಬಳಿಕ ಮಾತನಾಡಿ, ಕ್ಷಯರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದು ಒಬ್ಬ ದೃಢಪಟ್ಟ ಕ್ಷಯರೋಗಿಯು ಕೆಮ್ಮುವುದರಿಂದ ಮತ್ತು ಸೀನುವುದರಿಂದ ಇನ್ನೊಬ್ಬರಿಗೆ ಹರಡುತ್ತದೆ. ಒಬ್ಬ ಚಿಕಿತ್ಸೆಯನ್ನು ಪಡೆಯದ ಕ್ಷಯರೋಗಿಯು ಒಂದು ವರ್ಷದಲ್ಲಿ 10 ರಿಂದ 14 ಜನರಿಗೆ ಈ ಕ್ಷಯರೋಗವನ್ನು ಹರಡುತ್ತಾನೆ. ಈ ರೋಗವು ಮನುಷ್ಯನ ಕೂದಲು ಮತ್ತು ಉಗುರು ಹೊರತುಪಡಿಸಿ ಉಳಿದ ಎಲ್ಲಾ ಭಾಗಗಳಿಗೆ ಬರುವ ರೋಗವಾಗಿದೆ. ಈ ರೋಗದ ಮುಖ್ಯ ಲಕ್ಷಣಗಳು ಜ್ವರ, ಎರಡು ವಾರದ ಕೆಮ್ಮು, ಎದೆ ನೋವು, ಕಫದಲ್ಲಿ ರಕ್ತ ಬೀಳುವುದು, ತೂಕ ಕಡಿಮೆಯಾಗುವುದು, ಕತ್ತು ಮತ್ತು ಕಂಕುಳದಲ್ಲಿ ಗಡ್ಡೆ ಇರುವುದು ಪ್ರಮುಖ ಲಕ್ಷಣವಾಗಿದೆ ಎಂದರು.
ಸೂಕ್ಷ್ಮದರ್ಶಕ ಯಂತ್ರಗಳು, ಟ್ರೂನಾಟ್, ಸಿಬಿನಾಟ್ ಮತ್ತು ಕ್ಷ-ಕಿರಣ ಪರೀಕ್ಷೆಯ ಮೂಲಕ ಕ್ಷಯರೋಗವನ್ನು ಪತ್ತೆ ಮಾಡಲಾಗುವುದು. ಕ್ಷಯರೋಗವು ಅಪೌಷ್ಟಿಕ ಹೊಂದಿದವರಿಗೆ, ಮಧುಮೇಹಿ, ಹೆಚ್.ಐ.ವಿ ಸೋಂಕಿತರಿಗೆ, ತಂಬಾಕು ಸೇವನೆ ಮತ್ತು ಮದ್ಯಪಾನ ಮಾಡುವವರಿಗೆ ಬಹು ಬೇಗ ಹರಡುವ ಸಾಧ್ಯತೆ ಇರುತ್ತದೆ. ರೋಗದ ಲಕ್ಷಣಗಳು ಕಂಡರೆ ಹತ್ತಿರದ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಹೇಳಿದರು.
ಇದೆ ವೇಳೆ  ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮದ ಕುರಿತು ವಿವರಿಸಿದರು. ಜಿಲ್ಲೆಯಲ್ಲಿರುವ ಕಾರಾಗೃಹ, ಬಾಲಗೃಹಗಳು, ವ್ಯಸನ ಪುನರ್ವಸತಿ ಕೇಂದ್ರ ಮತ್ತು ಇತರೆ ಕ್ಲೋಸ್ ಸೆಟ್ಟಿಂಗ್‌ನಲ್ಲಿ ಲೈಂಗಿಕ ರೋಗ, ಹೆಚ್.ಐ.ವಿ ಕ್ಷಯ ಮತ್ತು ಹೆಪಟೈಟಿಸ್ ಕುರಿತಾಗಿ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವ ಬಗ್ಗೆ ತಿಳಿಸಿದರು.
ಕೊಪ್ಪಳ ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ವಿ.ಡಿ ಚೌಹಾಣ ಅವರು ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲ ಇಲಾಖೆಯವರು ವಿಶೇಷವಾಗಿ, ಕಾರಾಗೃಹದ ಬಂಧಿಗಳಿಗೆ ತಿಂಗಳಿಗೊಮ್ಮೆ ಚಿಕಿತ್ಸೆಗೊಳಪಡಿಸಿ ಸಂಬಂಧಿಸಿದ ಕಾಯಿಲೆಗೆ ಉಚಿತ ಔಷಧಗಳನ್ನು ನೀಡಿರುತ್ತಾರೆ. ಸುಮಾರು 80 ಜನ ಬಂಧಿಗಳು ಚರ್ಮರೋಗದಿಂದ ಗುಣಮುಖರಾಗಿದ್ದಾರೆ. ಟಿ.ಬಿ ಕಾಯಿಲೆಗೆ ಚಿಕಿತ್ಸೆ ಮತ್ತು ಪರೀಕ್ಷೆ ಎರಡು ಉಚಿತವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ನಮ್ಮ ಅಕ್ಕಪಕ್ಕದವರಿಗೂ ಮಾಹಿತಿ ನೀಡಿ, ಟಿ.ಬಿ ಕಾಯಿಲೆ ಹರಡುವುದನ್ನು ತಡೆಗಟ್ಟಲು ಭಾಗಿಯಾಗೋಣ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ಪೂಜಾರ, ಎನ್.ಟಿ.ಇ.ಪಿ ಕಾರ್ಯಕ್ರಮ ಸಂಯೋಜಕ ಶರಣಪ್ಪ ಭಜಂತ್ರಿ, ಡ್ಯಾಪ್ಕೊ ಜಿಲ್ಲಾ ಮೇಲ್ವಿಚಾರಕರಾದ ಮಾಲತೇಶ ಸಜ್ಜನ್, ಹಾಗೂ ಎನ್.ಟಿ.ಇ.ಪಿ. ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು,