ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನು ಅರಿವು ಶಿಬಿರ

ಚಾಮರಾಜನಗರ, ನ.15-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಮಕ್ಕಳ ಸಹಾಯವಾಣಿ ಸಹಯೋಗದೊಂದಿಗೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಇರುವ ಎ.ಡಿ.ಆರ್. ಕಟ್ಟಡದಲ್ಲಿಂದು ಮಕ್ಕಳ ದಿನಾಚರಣೆ ಹಾಗೂ 75ನೇ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಅಂಗವಾಗಿ ನಡೆದ 45 ದಿನಗಳ ಕಾನೂನು ಅರಿವು ಶಿಬಿರಗಳ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾಶಿವ ಎಸ್ ಸುಲ್ತಾನಪುರಿ ರವರು ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಎಲ್ಲಾ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಷಯ ತಿಳಿಸಿ ಮಾತನಾಡಿ ಎಲ್ಲಾ ಮಕ್ಕಳು ಕಾನೂನನ್ನು ಅರಿತು ತಮ್ಮ ತಮ್ಮ ಪೋಷಕರುಗಳಿಗೆ ಹಾಗೂ ಅಕ್ಕ ಪಕ್ಕದವರುಗಳಿಗೆ ಹೆಚ್ಚಿನ ತಿಳುವಳಿಕೆ ನೀಡಬೇಕು. ಮಕ್ಕಳ ಕಾನೂನು, ಮಕ್ಕಳ ಹಕ್ಕುಗಳು, ಪಾಲನೆ ಪೋಷಣೆಯ ಬಗ್ಗೆ ಅರಿಯಬೇಕು ಎಂದರು.
ಅಕ್ಟೋಬರ್ 2ರಿಂದ ನವೆಂಬರ್ 14ರವರೆಗೆ ಜಿಲ್ಲೆಯಲ್ಲಿ ಒಟ್ಟು 507 ಹಳ್ಳಿಗಳಲ್ಲಿ ಒಟ್ಟು 871 ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟು 75,711 ಫಲಾನುಭವಿಗಳು ಕಾನೂನು ಅರಿವು ಪಡೆದುಕೊಂಡಿರುತ್ತಾರೆ. ಜಿಲ್ಲೆಯ ಎಲ್ಲಾ ನ್ಯಾಯಾಲಯದ ನ್ಯಾಯಾಧೀಶರುಗಳು ಸಹ ಮನೆಮನೆಗೂ ಕರಪತ್ರಗಳನ್ನು ಹಂಚಿ ಸುಮಾರು 66,753 ಫಲಾನುಭವಿಗಳಿಗೆ ಕಾನೂನು ಅರಿವು ಮೂಡಿಸಿದ್ದಾರೆ ಎಮದು ತಿಳಿಸಿದರು.
ವೆಬಿನಾರ್ ಮೂಲಕ ಜಿಲ್ಲೆಯಲ್ಲಿ ಒಟ್ಟು 18 ಕಾರ್ಯಕ್ರಮಗಳನ್ನು ಮೊಬೈಲ್ ವ್ಯಾನ್‍ಗಳನ್ನು ಬಳಸಿಕೊಂಡು ಪಟ್ಟಣ ಹಾಗೂ ಗ್ರಾಮಗಳಲ್ಲಿ ಅಂದರೆ ಒಟ್ಟು 507 ಗ್ರಾಮಗಳನ್ನು ಪೂರ್ಣಗೊಳಿಸಿ ಒಟ್ಟು 15,651 ಫಲಾನುಭವಿಗಳಿಗೆ ಕಾನೂನು ಅರಿವು ಮೂಡಿಸಿದ್ದು, ಕಾರಾಗೃಹದಲ್ಲಿ 07 ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಒಟ್ಟು 472 ಜನರಿಗೆ ಕಾನೂನು ಅರಿವು ಮೂಡಿಸಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ರಾಷ್ಟ್ರೀಯ ಮಹಿಳಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯೊಂದಿಗೆ ಮಹಿಳೆಯರ ಸಬಲೀಕರಣದ ಕುರಿತು 02 ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾನೂನು ಅರಿವನ್ನು ಮೂಡಿಸಲಾಗಿದೆ. ಇದರೊಂದಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಇತರೆ ಇಲಾಖೆಗಳೊಂದಿಗೆ ಜಿಲ್ಲೆಯಲ್ಲಿ ಒಟ್ಟು 10 ಕಾನೂನು ಶಿಬಿರಗಳನ್ನು ಹಮ್ಮಿಕೊಂಡು ಒಟ್ಟು 3344 ಫಲಾನುಭವಿಗಳಿಗೆ ಕಾನೂನು ಅರಿವನ್ನು ಮೂಡಿಸಲಾಗಿದೆ ಎಮದು ನ್ಯಾಯಾಧೀಶರಾದ ಸದಾಶಿವ ಎಸ್. ಸುಲ್ತಾನ್‍ಪುರಿ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ ಎಂ ಮಾತನಾಡಿ ಪ್ರಾಧಿಕಾರ ಹಾಗೂ ಇತರೆ ಎಲ್ಲಾ ಇಲಾಖೆಗಳೊಂದಿಗೆ ಸೇರಿ ಅಕ್ಟೋಬರ್ 2ರಿಂದ ನವೆಂಬರ್ 14ರವರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿಗಳಾದ ಯಳಂದೂರು, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆ, ಜಿಲ್ಲಾ ವಕೀಲರ ಸಂಘ, ಕಾನೂನು ಸ್ವಯಂ ಸೇವಕರುಗಳು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ನಗರಸಭೆಯವರ ಸಹಯೋಗದೊಂದಿಗೆ ಕಟ್ಟ ಕಡೆಯ ವ್ಯಕ್ತಿಗೂ ಕಾನೂನಿನ ನೆರವು ಸಿಗಬೇಕೆಂಬ ಸದುದ್ದೇಶದಿಂದ ಹಲವು ಕಾನೂನು ಅರಿವು ಕಾರ್ಯಕ್ರಮಗಳನ್ನು, ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ 45 ದಿನಗಳ ಕಾರ್ಯಕ್ರಮ ಅಂತ್ಯಗೊಳ್ಳುತ್ತಿರುವುದರಿಂದ 45 ದಿನಗಳ ಕಾಲ ಕಾನೂನು ಅರಿವು ಕಾರ್ಯಕ್ರಮಗಳು ಹಾಗೂ ಶಿಬಿರಗಳನ್ನು ಹಮ್ಮಿಕೊಳ್ಳಲು ಸಹಕರಿಸಿದ ಎಲ್ಲಾ ಇಲಾಖೆಗಳಿಗೆ ಹಾಗೂ ಕಾನೂನು ಸ್ವಯಂ ಸೇವಕರುಗಳಿಗೆ ಪ್ರಾಧಿಕಾರದ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ನಗರದ ಪ್ರಧಾನ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ, ಮಕ್ಕಳ ಸಹಾಯವಾಣಿ ಸಂಯೋಜಕರಾದ ಲತಾ ಹಾಗೂ ಕಾನೂನು ಸ್ವಯಂ ಸೇವಕರುಗಳು ಹಾಗೂ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.