ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಕುರುಬರಿಗೆ ಅನ್ಯಾಯ: ಬೈಲಪ್ಪ ನೆಲೋಗಿ

ಕಲಬುರಗಿ,ಜ.22: ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಕುರುಬ ಸಮುದಾಯದವರಿಗೆ ನಿರ್ಲಕ್ಷಿಸಲಾಗುತ್ತಿದೆ ಎಂದು ಸಮಾಜದ ಮುಖಂಡರೂ ಆದ ಕಾಂಗ್ರೆಸ್ ಧುರೀಣ ಬೈಲಪ್ಪ ನೆಲೋಗಿ ಅವರು ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಮುದಾಯವು 250,000 ಮತದಾರರನ್ನು ಹೊಂದಿದೆ. ಜೇವರ್ಗಿಯಲ್ಲಿ 40,000, ಚಿತ್ತಾಪುರದಲ್ಲಿ 30,000, ಆಳಂದ್‍ದಲ್ಲಿ 30,000, ಚಿಂಚೋಳಿಯಲ್ಲಿ 35,000, ಚಿತ್ತಾಪುರದಲ್ಲಿ 30,000, ಸೇಡಂದಲ್ಲಿ 25000, ಕಲಬುರ್ಗಿ ಗ್ರಾಮೀಣದಲ್ಲಿ 30,000, ಕಲಬುರ್ಗಿ ದಕ್ಷಿಣದಲ್ಲಿ 20,000, ಉತ್ತರದಲ್ಲಿ 8000 ಮತದಾರರನ್ನು ಸಮಾಜ ಹೊಂದಿದ್ದು, ಪ್ರತಿಯೊಂದು ಮತಕ್ಷೇತ್ರದಲ್ಲಿ ಕುರುಬ ಸಮಾಜದ ಮತದಾರರು ನಿರ್ಣಾಯಕರಾಗಿದ್ದಾರೆ ಎಂದರು.
ಕುರುಬ ಸಮಾಜವು ಕೊಲ್ಲೂರು ಮಲ್ಲಪ್ಪನವರ ನಂತರ ಮಲ್ಲಿಕಾರ್ಜುನ್ ಖರ್ಗೆ ಅವರ ನಾಯಕತ್ವಕ್ಕೆ ಸಂಪೂರ್ಣ ಬೆಂಬಲ ನೀಡುತ್ತ ಬಂದಿದೆ ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ತು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಯಾವುದೇ ಚುನಾವಣೆ ಇರಲಿ, ಯಾರೇ ಅಭ್ಯರ್ಥಿಯಾಗಿರಲಿ, ಮಲ್ಲಿಕಾರ್ಜುನ್ ಖರ್ಗೆ, ದಿ. ಧರ್ಮಸಿಂಗ್ ಅವರ ನಿರ್ದೇಶನದಂತೆ ಒಂದೇ ನಿರ್ಣಯ ಮಾಡಿ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಬೆಂಬಲಿಸಿ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಯಾವುದೇ ಸಭೆ ಇರಲಿ, ಸಮಾರಂಭವಿರಲಿ, ದೊಡ್ಡ ದೊಡ್ಡ ಸಮಾವೇಶವಿರಲಿ, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜನರು ಭಾಗವಹಿಸುತ್ತಾರೆ. ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಆದಾಗ್ಯೂ, ಸಮಾಜಕ್ಕೆ ಸಭೆ, ಸಮಾರಂಭ ಹಾಗೂ ಧಾರ್ಮಿಕ ಸಭೆಗಳಲ್ಲಿ ಕುರುಬ ಸಮಾಜಕ್ಕೆ ಅನ್ಯಾಯವಾಗುತ್ತಿದೆ. ಸಮಾಜದ ಸ್ವಾಮೀಜಿಗಳು, ಜಾಗೃತ ಯುವಕರು ಈ ಕುರಿತು ಅಸಮಾಧಾನ ಹೊರಹಾಕುತ್ತಿದ್ದಾರೆ. ಆದಾಗ್ಯೂ, ಕಾಂಗ್ರೆಸ್ ಬೆಂಬಲಿಸಿದರೂ ಸಹ ಸಮಾಜಕ್ಕೆ ನೀಡಿರುವ ಸ್ಥಾನಮಾನ ಶೂನ್ಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜಕ್ಕೆ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಒಂದೇ ಒಂದು ವಿಧಾನಸಭಾ ಟಿಕೆಟ್ ಕೊಟ್ಟಿಲ್ಲ. ಒಬ್ಬರಿಗೂ ವಿಧಾನ ಪರಿಷತ್‍ಗೆ ನೇಮಕಾತಿ ಮಾಡಿಲ್ಲ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ಸರ್ಕಾರ ಅಧಿಕಾರದಲ್ಲಿದ್ದಾಗ ಜಿಲ್ಲೆಯಿಂದ ಒಬ್ಬರಿಗೂ ನಿಗಮ ಮಂಡಳಿಗಳಲ್ಲಾಗಲಿ ನಾಮ ನಿರ್ದೇಶನ ಮಾಡಿಲ್ಲ. ಪಕ್ಷದಲ್ಲಿಯೂ ಸಹ ಯಾವುದೇ ಸ್ಥಾನಮಾನ ಕೊಟ್ಟಿಲ್ಲ. ಎಐಸಿಸಿ, ಕೆಪಿಸಿಸಿ ಹಾಗೂ ಡಿಸಿಸಿ ಸೇರಿದಂತೆ ಇತ್ತೀಚೆಗೆ ರಚಿಸಲಾದ ಚುನಾವಣಾ ಸಮಿತಿಗಳಲ್ಲಿಯೂ ಸ್ಥಾನ ಕೊಟ್ಟಿಲ್ಲ ಎಂದು ಅವರು ಆರೋಪಿಸಿದರು.
ಎಲ್ಲ ಅನ್ಯಾಯಗಳನ್ನು ಸರಿಪಡಿಸದೇ ಹೋದಲ್ಲಿ ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ನಿಂಗಪ್ಪ ಹೇರೂರ್, ಕೆ. ಪ್ರಧಾನಿ, ಶರಣಪ್ಪ ಕೆಸರಟಗಿ, ಹಯ್ಯಾಳಪ್ಪ ಪೂಜಾರಿ, ಮಲ್ಲಿಕಾರ್ಜುನ್ ತಾಳಿಕೋಟೆ, ಶಿವಲಿಂಗ್ ಯಳಸಂಗಿ ಮುಂತಾದವರು ಉಪಸ್ಥಿತರಿದ್ದರು.