ಜಿಲ್ಲಾ ಕಸಾಪಕ್ಕೆ ಹೊಸ ಸಾರಥ್ಯ ಅತ್ಯಗತ್ಯ

ಔರಾದ್:ಏ.05: ‘ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಹೊಸಬರಿಗೆ ಕೆಲಸ ಮಾಡಲು ಅವಕಾಶ ಕೊಡಬೇಕು’ ಎಂದು ಕಸಾಪ ಮಾಜಿ ಅಧ್ಯಕ್ಷ ಚಂದ್ರಕಾಂತ ನಿರ್ಮಳೆ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆ ಸಂಬಂಧ ಶನಿವಾರ ಇಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಪರಿಷತ್ತಿನ ಈಗಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರು ಮಾತು ತಪ್ಪಿ ವಚನಭ್ರಷ್ಟರಾಗಬಾರದು. ಈ ಬಾರಿ ರಾಜಕುಮಾರ ಹೆಬ್ಬಾಳೆ ಅವರಿಗೆ ಅವಕಾಶ ಕೊಡಬೇಕು’ ಎಂದು ಹೇಳಿದರು.

‘ತಾಲ್ಲೂಕು ಕಸಾಪ ಅಧ್ಯಕ್ಷ ಜಗನ್ನಾಥ ಮೂಲಗೆ ಅವರು ಪ್ರಾಮಾಣಿ
ಕತೆಯಿಂದ ಕನ್ನಡ ಕೆಲಸ ಮಾಡುತ್ತಿ ದ್ದಾರೆ. ಕೆಲವರು ಅವರ ಮುಗ್ಧತೆ ದುರ್ಬಳಕೆ ಮಾಡಿಕೊಂಡು ಪರಿಷತ್ತಿನ ಹೆಸರು ಹಾಳು ಮಾಡಿದ್ದಾರೆ’ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ರಾಜಕುಮಾರ ಹೆಬ್ಬಾಳೆ ಮಾತನಾಡಿ, ‘ಜಾನಪದ ಪರಿಷತ್‍ನಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ.ಇಲ್ಲಿಯ ಜಾನಪದ ಕಲಾವಿದರ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ನೀಡಿದ್ದೇನೆ. ಕನ್ನಡ ಕೆಲಸ ಮಾಡಲು ನನಗೊಂದು ಅವಕಾಶ ನೀಡಿ’ ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ ಘಾಟೆ ಮಾತನಾಡಿ, ‘ಪರಿಷತ್ ಸದಾ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವುದು ಅಗತ್ಯವಾಗಿದೆ’ ಎಂದು ಹೇಳಿದರು.

ಡಾ. ಜಗನ್ನಾಥ ಹೆಬ್ಬಾಳೆ, ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಸಂಜುಕುಮಾರ ಜುಮ್ಮಾ, ಶಿವಾಜಿರಾವ ಚಿಟಗಿರೆ, ಎಸ್.ಬಿ. ಕೋಚಬಾಳ, ಸೂರ್ಯಕಾಂತ ಸಿಂಗೆ, ಬಸವರಾಜ ಶೆಟಕಾರ, ಶರಣಪ್ಪ ಚಿಟ್ಮೆ, ಶಾಮಸುಂದರ ಖಾನಾಪುರಕರ್, ಯಾದವ ಮೇತ್ರೆ, ಶರಣಪ್ಪ ಪಾಟೀಲ, ರಾಜು ಯಡವೆ ಇದ್ದರು.

ಕನ್ನಡಿಗರಲ್ಲಿ ತಾರತಮ್ಯ: ಆಕ್ಷೇಪ

‘ಈ ಬಾರಿ ಸಾಹಿತ್ಯ ಪರಿಷತ್‍ನವರು ಎಲ್ಲ ಹಂತದಲ್ಲಿ ಕನ್ನಡಕ್ಕಾಗಿ ಕೆಲಸ ಮಾಡಿದವರನ್ನು ಕಡೆಗಣಿಸಿದ್ದಾರೆ’ ಎಂದು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.

ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಶಿವಾಜಿರಾವ ಚಿಟಗಿರೆ ಮಾತನಾಡಿ, ‘ಅನ್ಯ ಭಾಷಿಕರು ಹಾಗೂ ಅಲ್ಪಸಂಖ್ಯಾತರನ್ನು ಬೇರೆ ದೃಷ್ಟಿಯಿಂದ ನೋಡಲಾಗಿದೆ. ತಾಲ್ಲೂಕಿನ ಗಡಿ ಭಾಗದಲ್ಲಿ ಕನ್ನಡಕ್ಕಾಗಿ ದುಡಿದ ಸಾಜಿದ್ ಅವರನ್ನು ದಾಬಕಾ ವಲಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಗಿದೆ. ಗಡಿ ಭಾಗದಲ್ಲಿ ಸಾಮಾನ್ಯವಾಗಿ ಎಲ್ಲ ಭಾಷೆ ಮಾತನಾಡುವ ಜನ ಇರುತ್ತಾರೆ. ಅಂತವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಬಿಟ್ಟು ಅವರನ್ನು ಬೇರೆಯಾಗಿ ಗುರುತಿಸುವುದು ಕನ್ನಡ ಬೆಳವಣಿಗೆಗೆ ಪೂರಕವಲ್ಲ’ ಎಂದು ಹಾಲಿ ಸಾಹಿತ್ಯ ಪರಿಷತ್ ಘಟಕದ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದರು.

‘ಈಚೆಗೆ ಔರಾದ್‍ನಲ್ಲಿ ನಡೆದ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಪರಿಷತ್ ಅಧ್ಯಕ್ಷ ಮೂಲಗೆ ಅವರ ಮುಖ ನೋಡಿ ನಾವು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದೇವೆ’ ಎಂದು ಚಂದ್ರಕಾಂತ ನಿರ್ಮಳೆ ಬೇಸರ ವ್ಯಕ್ತಪಡಿಸಿದರು.