ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಸಿ.ವಿ. ಪಾಟೀಲರಿಗೆ  ಅಧಿಕೃತ ಆಹ್ವಾನ

ಸಂಜೆವಾಣಿ ವಾರ್ತೆ

ಹರಿಹರ.ಮಾ.೭; ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಶಿವಮೊಗ್ಗ ರಸ್ತೆಯಲ್ಲಿನ ಸಿದ್ದೇಶ್ವರ ಪ್ಯಾಲೇಸ್ ಸಭಾಂಗಣದಲ್ಲಿ ಮಾ. 18 ಮತ್ತು 19 ರಂದು ನಡೆಯುವ 13 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಬಿ.ಪಿ. ಹರೀಶ್ ಹೇಳಿದರು.ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ. ಸಿ.ವಿ. ಪಾಟೀಲ್ ಅವರನ್ನು ಅವರ ನಿವಾಸದಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಅಧಿಕೃತ ಆಹ್ವಾನ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಪರ ಸಂಘಟನೆಗಳು ಹಾಗೂ ಪತ್ರಿಕಾ ಮಾಧ್ಯಮ ಒಳಗೊಂಡAತೆ ಹರಿಹರದಲ್ಲಿ ಜಿಲ್ಲಾ ಸಮ್ಮೇಳನವನ್ನ ಆಯೋಜನೆ ಮಾಡಿರುವುದು ಹರ್ಷವಾಗುತ್ತಿದೆ ನಾನು ಕೂಡ ಒಬ್ಬ ಕನ್ನಡ ಅಭಿಮಾನಿಯಾಗಿ ಕಾರ್ಯಕರ್ತನಂತೆ ಈ ಸಮ್ಮೇಳನ ಯಶಸ್ವಿಗೆ ಶ್ರಮಿಸುತ್ತೇನೆ ಎಂದರು.ಈ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಪ್ರೊ. ಸಿ.ವಿ. ಪಾಟೀಲ್ ಅವರನ್ನು ಸಾಹಿತಿಗಳು ಮತ್ತು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವ ಮೂಲಕ ಈ ಜಿಲ್ಲೆ ಮತ್ತು ತಾಲೂಕಿಗೆ ಚಿರಪರಿಚಿತರು ಇವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಜಿಲ್ಲೆಯ ಸಾಹಿತ್ಯ ಲೋಕಕ್ಕೆ ಸಂತಸ ತಂದಿದೆ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಹರಿಹರ ತಾಲ್ಲೂಕಿನ ಹಿರಿಯ ಸಾಹಿತಿಗಳು, ಸಾಹಿತ್ಯ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿ, ಜೊತೆಗೆ 32 ಕೃತಿಗಳನ್ನು ರಚಿಸುವುದರೊಂದಿಗೆ ಪ್ರಾಧ್ಯಾಪಕ ವೃತ್ತಿಯಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಪ್ರೊ. ಸಿ.ವಿ. ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.ಹರಿಹರ ನಗರದಲ್ಲಿ ಸಾಕಷ್ಟು ಸಾಹಿತ್ಯ ಆಸಕ್ತರು ಇದ್ದರೂ ಸಹ ಸಮ್ಮೇಳನಗಳು ಕಡಿಮೆ ಸಂಖ್ಯೆಯಲ್ಲಿ ನಡೆದಿವೆ. ಹರಿಹರ ತಾಲ್ಲೂಕಿನಲ್ಲಿ 3 ತಾಲ್ಲೂಕು ಸಮ್ಮೇಳನ, 2 ಜಿಲ್ಲಾ ಸಮ್ಮೇಳನ ಇದುವರೆಗೂ ನಡೆದಿರುವುದರಿಂದ ನಾನು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಇತ್ತೀಚೆಗೆ ಉಕ್ಕಡಗಾತ್ರಿ ಗ್ರಾಮದಲ್ಲಿ ತಾಲ್ಲೂಕು ಸಮ್ಮೇಳನ ಅದ್ದೂರಿಯಾಗಿ ನಡೆಸಲಾಯಿತು. ಈಗ ಮತ್ತೊಮ್ಮೆ ಜಿಲ್ಲಾ ಸಮ್ಮೇಳನ ನಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.