ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಐವರ ನಾಮನಿರ್ದೇಶನ

ಕಲಬುರಗಿ:ನ.20: ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿಯನ್ನು ಪುನರ್ರಚಿಸಲಾಗಿದ್ದು, ಬುಧವಾರ ಐವರನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.
ಹಿರಿಯ ಸಾಹಿತಿ, ಎನ್.ವಿ. ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸ್ವಾಮಿರಾವ ಕುಲಕರ್ಣಿ, ರಂಗಭೂಮಿ ಕಲಾವಿದೆ ಡಾ. ಸುಜಾತಾ ಜಂಗಮಶೆಟ್ಟಿ, ದೊಡ್ಡಪ್ಪ ಅಪ್ಪ ವಸತಿ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಆನಂದ ಸಿದ್ದಾಮಣಿ, ಸತ್ಯಂ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಬಿ.ಎಚ್. ನಿರಗುಡಿ ಹಾಗೂ ಪತ್ರಕರ್ತ ಹಾಗೂ ಸಾಹಿತಿ ಸಂಗಮನಾಥ ರೇವತಗಾಂವ ನೂತನವಾಗಿ ನೇಮಕಗೊಂಡವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ (ಆಡಳಿತ ಕನ್ನಡ) ಅಧೀನ ಕಾರ್ಯದರ್ಶಿ ಹೆಚ್.ಕೆ. ಸುರೇಶ ಬಾಬು ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಭಾಷಾ ನೀತಿ ಅನುಷ್ಠಾನದಲ್ಲಿ ಜನರು ಪಾಲ್ಗೊಳ್ಳುವಂತೆ ನೋಡಿಕೊಳ್ಳುವುದಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧೀನದಲ್ಲಿ ಜಿಲ್ಲಾ, ತಾಲೂಕು ಮತ್ತು ಮಹಾನಗರ ಪಾಲಿಕೆ ಮಟ್ಟದಲ್ಲಿ ಕನ್ನಡ ಜಾಗೃತಿ ಸಮಿತಿಗಳನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಈಗ ಜಿಲ್ಲಾ ಮಟ್ಟದ ಸಮಿತಿಗೆ ಈ ಐವರನ್ನು ನೇಮಿಸಲಾಗಿದೆ.