ಜಿಲ್ಲಾ ಎಸ್ಪಿ ನೇತೃತ್ವದ ಪೊಲೀಸ್ ತಂಡಕ್ಕೆ ಅಭಿನಂದನೆ ಬಾಲಕನ ಅಪಹರಣ ಪ್ರಕರಣ:


ಮಂಗಳೂರು, ಡಿ.೨೨- ಉಜಿರೆ ಬಾಲಕನ ಅಪಹರಣ ಪ್ರಕರಣವನ್ನು ಕೇವಲ ೩೩ ಗಂಟೆಯಲ್ಲೇ ಬೇಧಿಸಿ ಬಾಲಕನನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ ದ.ಕ. ಜಿಲ್ಲಾ ಸ್ಪಿ ಲಕ್ಷ್ಮೀಪ್ರಸಾದ್ ನೇತೃತ್ವದ ಪೊಲೀಸ್ ತಂಡಕ್ಕೆ ಅಭಿನಂದಿಸುವ ಕಾರ್ಯಕ್ರಮವು ಸೋಮವಾರ ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ನಡೆಯಿತು.
ಪೊಲೀಸ್ ತಂಡವನ್ನು ಅಭಿನಂದಿಸಿದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಾಲಕ ಅನುಭವ್ ಅಪಹರಣ ಜಿಲ್ಲೆಯ ಜನತೆಯ ಆತಂಕಕ್ಕೆ ಕಾರಣವಾಗಿತ್ತು. ಈ ಪ್ರಕರಣವನ್ನು ಬೇಧಿಸಲು ಪೊಲೀಸ್ ತಂಡ ಕರಾರುವಕ್ಕಾಗಿ, ಯೋಜನಾ ಬದ್ಧವಾಗಿ ಕಾರ್ಯನಿರ್ವಹಣೆ ಮಾಡಿ ಆರೋಪಿಗಳನ್ನು ಬಂಧಿಸಿರುವುದು ಶ್ಲಾಘನೀಯ. ಪೊಲೀಸರ ಈ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ ಎಂದರು. ಜಿಲ್ಲೆಯಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಯುತ್ತಿರುವ ಕೃತ್ಯ ಖಂಡನೀಯ. ಇಂತಹ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ಈ ಕಾರ್ಯಾಚರಣೆಯ ಹಿಂದೆ ಪೊಲೀಸ್ ತಂಡದ ಶ್ರಮವಿದೆ. ಅಧಿಕಾರಿ ಗಳು ಘಟನೆ ನಡೆದ ಬಳಿಕ ಎರಡು ದಿನ ನಿದ್ದೆಬಿಟ್ಟು ಕೆಲಸ ಮಾಡಿದ್ದಾರೆ. ಎಲ್ಲರ ಸಹಕಾರದಿಂದ ಸಾಧ್ಯವಾಯಿತು ಎಂದರು. ಮೇಯರ್ ದಿವಾಕರ್, ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ಇನ್‌ಸ್ಪೆಕ್ಟರ್ ಸಂದೇಶ್, ಎಸ್ಸೈಗಳಾದ ನಂದಕುಮಾರ್, ರವಿ ಬಿ.ಎಸ್., ಪವನ್, ಈರಯ್ಯ, ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್ ಶೇಣವ ಉಪಸ್ಥಿತರಿದ್ದರು. ಅಪಹರಣ ಪ್ರಕರಣವನ್ನು ಬೇಧಿಸಿದ ಜಿಲ್ಲಾ ಪೊಲೀಸರಿಗೆ ಹಾಗೂ ಇತ್ತೀಚಿನ ಗೋಡೆ ಬರಹ ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿ ಆರೋಪಿ ಗಳನ್ನು ಬಂಧಿಸಿದ ನಗರ ಪೊಲೀಸರಿಗೂ ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದನೆ ಸಲ್ಲಿಸಿದರು. ಯಾವುದೇ ಸುಳಿವಿಲ್ಲದ ಈ ಪ್ರಕರಣವನ್ನು ಕೂಡಾ ಬೇಧಿಸುವುದು ನಗರ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಆದರೆ ಸೂಕ್ಷ್ಮವಾಗಿ ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರ ಬಂಧನ ಬಾಕಿಯಿದೆ ಎಂಬ ಮಾಹಿತಿ ಸಿಕ್ಕಿದ್ದು, ಆ ಬಳಿಕ ನಗರ ಪೊಲೀಸರಿಗೂ ಅಭಿನಂದನೆ ಸಲ್ಲಿಸಲಾಗುವುದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.