ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ:ಜಿಲ್ಲಾಧಿಕಾರಿ ವಿರುದ್ಧ ಅಸಮಧಾನ ಹೊರಹಾಕಿದ ಹೋರಾಟಗಾರರು

ಅಫಜಲಪುರ:ಮಾ.22: ಕಳೆದ ಏಳೆಂಟು ದಿನಗಳಿಂದ ಭೀಮಾ ನದಿಗೆ ನೀರು ಹರಿಸಲು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆದಿದೆ. ಆದರೆ ನೀರು ಹರಿಸುವ ಕುರಿತು ನಮಗೆ ಯಾವುದೇ ಭರವಸೆ ಸಿಗುತ್ತಿಲ್ಲ ಎಂದು ಹೋರಾಟ ಸಮಿತಿಯ ಮುಖ್ಯಸ್ಥ ಚಿದಾನಂದ ಮಠ ಅಗ್ರಹಿಸಿದರು.

ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಲ್ಲಿ ಕಳೆದ 8 ದಿನಗಳಿಂದ ಯುವ ಮುಖಂಡ ಶಿವಕುಮಾರ ನಾಟೀಕಾರ ನೇತೃತ್ವದಲ್ಲಿ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 5 ಟಿ.ಎಂ.ಸಿ ನೀರು ಹರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡ ಅಮರಣಾಂತ ಉಪವಾಸ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಅನೇಕ ಜನ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬಂದು ಹೋಗಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೂಡಲೇ ಭೀಮಾ ನದಿಗೆ ನೀರು ಹರಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಮ್ಮ ಹೋರಾಟದ ದೆಸೆ ಬದಲಾವಣೆ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ದಲಿತ ಸೇನೆಯ ತಾಲೂಕು ಅಧ್ಯಕ್ಷ ಮಹಾಂತೇಶ ಬಳೂಂಡಗಿ ಮಾತನಾಡಿ ಕಳೆದ ಏಳೆಂಟು ದಿನಗಳಿಂದ ಶಿವಕುಮಾರ ನಾಟೀಕಾರ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ. ಆದರೆ ಸೌಜನ್ಯಕ್ಕಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಅಥವಾ ಜಿಲ್ಲಾಧಿಕಾರಿಗಳಾಗಲಿ ಸ್ಥಳಕ್ಕೆ ಆಗಮಿಸಿಲ್ಲ. ನಾಟೀಕಾರ ಜೀವಕ್ಕೆ ಏನಾದರೂ ಹಾನಿಯಾದರೆ ಯಾರೂ ಜವಾಬ್ದಾರಿ ಎಂದು ಪ್ರಶ್ನಿಸಿದರು.

ಈ ವೇಳೆ ಡಾ.ಎಂ.ಎಸ್ ಜೋಗದ್, ಸಂತೋಷ ದಾಮಾ, ಬಸಣ್ಣ ಗುಣಾರಿ, ಬಸವರಾಜ ಚಾಂದಕವಟೆ, ಶಿವಪುತ್ರಪ್ಪ ಸಂಗೋಳಗಿ, ಚಂದು ನಿಂಬಾಳ, ರಾಜು ಚವ್ಹಾಣ, ಭೀಮರಾವ ಗೌರ, ಯಶವಂತ ಬಡದಾಳ, ಸಿದ್ರಾಮಯ್ಯ ಹಿರೇಮಠ, ಶಾಂತು ಅಂಜುಟಗಿ, ಪ್ರಭಾವತಿ ಮೇತ್ರಿ, ಪ್ರತಿಭಾ ಮಹೀಂದ್ರಕರ, ಸಿದ್ದುಗೌಡ ಪಾಟೀಲ, ಶ್ರೀಕಾಂತ ದಿವಾಣಜಿ, ರಾಜಕುಮಾರ ಉಕ್ಕಲಿ ಅನೇಕರಿದ್ದರು.