ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ಆಗ್ರಹ

ಕೋಲಾರ,ಮೇ.೧: ಕೋವಿಡ್ ನಿಯಂತ್ರಣ ಕ್ರಮಗಳ ಕಟ್ಟುನಿಟ್ಟಿನ ಜಾರಿಗೆ ಅನುವಾಗುವಂತೆ ಕೋಲಾರ ಜಿಲ್ಲೆಗೆ ಕೂಡಲೇ ಉಸ್ತುವಾರಿ ಸಚಿವರನ್ನು ನೇಮಿಸುವಂತೆ ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಮುಖ್ಯಮಂತ್ರಿಗಳಿಗೆ ಪತ್ರಬರೆದು ಆಗ್ರಹಿಸಿದ್ದಾರೆ.
ಈ ಪತ್ರದಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳು ಅಥವಾ ಆರೋಗ್ಯ ಮೂಲಸೌಕರ್ಯ ಹೆಚ್ಚಿಸುವ ಕ್ರಮಗಳು ವ್ಯವಸ್ಥಿತರವಾಗಿ ಜಾರಿಯಾಗಿಲ್ಲ ಎಂಬ ಗಂಭೀರವಾದ ವಿಷಯವನ್ನು ತಮ್ಮ ಗಮನಕ್ಕೆ ತರುತ್ತಿರುವುದಾಗಿ ವೈಎಎನ್ ತಿಳಿಸಿದ್ದಾರೆ.
ಇಡೀ ರಾಜ್ಯದಲ್ಲಿ ಕೋವಿಡ್ ಮಹಾಮಾರಿ ಸೋಂಕಿನ ೨ನೇ ಅಲೆ ವ್ಯಾಪಕವಾಗಿದೆ, ಸೋಂಕು ನಿಯಂತ್ರಣಕ್ಕಾಗಿ ಮತ್ತು ಜನರ ಸುರಕ್ಷತೆಗಾಗಿ ತಾವು ಅನೇಕ ನಿರ್ಬಂಧಗಳು, ಆಕ್ಸಿಜನ್ ವ್ಯವಸ್ಥೆ, ಔಷಧಿ ಪೂರೈಕೆ ಮೊದಲಾದ ಕ್ರಮಗಳನ್ನು ಕೈಗೊಂಡಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಕೋಲಾರ ಜಿಲ್ಲೆಯಲ್ಲಿ ಪ್ರತಿ ನಿತ್ಯ ಒಂದು ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್, ಔಷಧಿ, ಮಾನವ ಸಂಪನ್ಮೂಲಗಳ ಕೊರತೆ ಕಾಡುತ್ತಿದೆ, ಇಂತಹ ಅಸಮರ್ಪಕ ನಿರ್ವಹಣೆ ಕುರಿತು ಸಾರ್ವಜನಿಕರು ದೂರುತ್ತಿದ್ದಾರೆ ಎಂದು ಗಮನಕ್ಕೆ ತಂದಿದ್ದಾರೆ.
ರಾಜ್ಯ ಸರ್ಕಾರ ಎಲ್ಲಾ ಆಯಾಮಗಳಲ್ಲೂ ಕ್ರಮ ವಹಿಸುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ, ಆದರೆ ಸರ್ಕಾರದ ಕ್ರಮಗಳು ಸೌಲಭ್ಯಗಳು ಕೋಲಾರದ ಸಾಮಾನ್ಯ ಜನರಿಗೆ ತಲುಪುತ್ತಿಲ್ಲ ಎಂಬುದು ವಿಷಾದನೀಯ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಕೋವಿಡ್‌ನ ಇಂತಹ ಸಂಕಷ್ಟದಲ್ಲೂ ಜಿಲ್ಲಾ ಉಸ್ತುವಾರಿಗೆ ಯಾರನ್ನು ಸರ್ಕಾರ ನೇಮಿಸಿಲ್ಲ, ಇದರಿಂದಾಗಿ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಗೃಹ ಇಲಾಖೆ ಮೊದಲಾದ ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಗಮನಕ್ಕೆ ತಂದಿದ್ದಾರೆ.
ಉಸ್ತುವಾರಿ ಸಚಿವರಿಲ್ಲದ ಕಾರಣ ಜಿಲ್ಲಾಡಳಿತ ಏಕಸೂತ್ರ ಇಲ್ಲದಂತಾಗಿದೆ, ಇದರ ಪರಿಣಾಮ ಸಾಮಾನ್ಯ ಜನರ ಮೇಲಾಗುತ್ತಿದೆ, ಈ ನಡುವೆ ಸಂಘಟನೆಳು, ಸಾರ್ವಜನಿಕರೂ ಸಹಾ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸುವಂತಾಗಿದೆ ಎಂದು ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗದ ಗಂಭೀರ ಸ್ವರೂಪ ಕಣ್ಣಮುಂದೆ ಇರುವಾಗ ಆಡಳಿತ ವ್ಯವಸ್ಥೆ ರೂಪಿಸಿ ಎಲ್ಲಾ ಬಗೆಯ ಆರೋಗ್ಯಸೌಲಭ್ಯಗಳು ಜನರಿಗೆ ಶೀಘ್ರ ತಲುಪುವಂತೆ ಮಾಡಲು ಜಿಲ್ಲೆಗೆ ಓರ್ವ ಉಸ್ತುವಾರಿ ಸಚಿವರನ್ನು ನೇಮಿಸುವುದು ಸೂಕ್ತವಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುವ ಮೂಲಕ ಈ ಮಹಾಮಾರಿಯಿಂದ ಮುಕ್ತ ಕೊಡಿಸಲು ಕೂಡಲೇ ಉಸ್ತುವಾರಿ ಸಚಿವರನ್ನು ನೇಮಿಸುವಂತೆ ಕಳಕಳಿಯಿಂದ ಮನವಿಮಾಡುತ್ತಿದ್ದೇನೆ ಎಂದು ವೈ.ಎ.ಎನ್. ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.