ಜಿಲ್ಲಾ ಉಸ್ತುವಾರಿ ಸಚಿವರಿಂದ ಬರಪೀಡಿತ ವಿವಿಧ ತಾಲೂಕಿನ ಪ್ರದೇಶಗಳಿಗೆ ಭೇಟಿ ವೀಕ್ಷಣೆ

ವಿಜಯಪುರ ನ.16: ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ ಪಾಟೀಲ ಅವರು ಜಿಲ್ಲೆಯ ಬರಪೀಡಿತ ತಾಲೂಕು ವಿಜಯಪುರ, ಇಂಡಿ, ಚಡಚಣ, ದೇವರ ಹಿಪ್ಪರಗಿ, ಮುದ್ದೇಬಿಹಾಳ ಹಾಗೂ ಬಸವನ ಬಾಗೇವಾಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬರ ನಿರ್ವಹಣೆ ಕುರಿತು ಪರಿಶೀಲನೆ ಹಾಗೂ ಜನ- ಜಾನುವಾರು, ಕುಡಿಯುವ ನೀರು, ಮೇವಿನ ಪರಿಸ್ಥಿತಿ, ನರೇಗಾ ಯೋಜನೆ ಕಾಮಗಾರಿ, ಗ್ರಾಮೀಣ ಪ್ರದೇಶದವÀರಿಗೆ ಉದ್ಯೋಗ ಸೃಜನೆ ಸೇರಿದಂತೆ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದರು.
ರೇವಣಸಿದ್ದೇಶ್ವರ ಏತ ನೀರಾವರಿ ಕಾಮಗಾರಿಯ ಮುಳವಾಡ ಎರಡನೇ ಹಂತದ ಏತ ನೀರಾವರಿ ಕಾಮಗಾರಿಯ ತಿಡಗುಂದಿ ಹತ್ತಿರವಿರುವ 48ಕಿ.ಮಿ. ಪ್ರಗತಿಯಲಿರುವ ಜಾಕ್‍ವೆಲ್ ಕಾಮಗಾರಿಯನ್ನು ವೀಕ್ಷಣೆ ಮಾಡಿ ಜಾಕ್‍ವೆಲ್‍ನಿಂದ 19 ಕರೆಗಳು ತುಂಬಿ ಹೊರ್ತಿ, ಇಂಚಗೇರಿ, ಜಿಗಜಿವಣಿ, ಗುಂದವಾನ, ಸಾತಲಗಾಂವ್ ಹಾಗೂ ಸುತ್ತಮುತ್ತಲಿನ ಸುಮಾರು 50 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. 18 ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಕಾಲಾವಕಾಶವಿದ್ದು ಅವಧಿ ಪೂರ್ವ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು.ಈ ಭಾಗದಲ್ಲಿ ಕುಡಿಯುವ ನೀರಿನ ತೊಂದರೆಯಿದ್ದು, ಈ ಕಾಮಗಾರಿ ಪೂರ್ಣವಾದ ನಂತರ ಈ ಭಾಗದ 19 ಕೆರೆÀಗಳು ತುಂಬಿ ಹೊರ್ತಿ, ಇಂಚಗೇರಿ, ಜಿಗಜಿವಣಿ, ಗುಂದವಾನ, ಸಾತಲಗಾಂವ್, ಕೆರೂರ, ದೇವರ ನಿಂಬರಗಿ ಸೇರಿದಂತೆ ಸುತ್ತಮುತ್ತಲಿನ ಸುಮಾರು 50 ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಹಾಗೂ 28 ಸಾವಿರ ಹೆಕ್ಟೇರ ಪ್ರದೇಶ ಭೂಮಿ ನೀರಾವರಿ ಒಳಪಡಲಿದೆ ಜೊತೆಗೆ ಅಂತರ್ಜಲ ಮಟ್ಟ ಕೂಡ ಹೆಚ್ಚಾಗಲಿದ್ದು ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಗಿರಿಮಲ್ಲಪ್ಪ ಚಂದ್ರಕಾಂತ ಇವರು 1 ಎಕರೆ 4 ಗುಂಟೆ ಜಮೀನಿನಲ್ಲಿ ಬೆಳೆದ ಲಿಂಬೆ ಬೆಳೆ ಹಾನಿ ವೀಕ್ಷಣೆ ನಡೆಸಿದರು. ಈ ಭಾಗದಲ್ಲಿ 7ಸಾವಿರ ಹೆಕ್ಟೆರ್ ಲಿಂಬೆ ಬೆಳೆ ಹಾನಿಯಾಗಿದ್ದು, ಸೂಕ್ತ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಚಡಚಣ ತಾಲೂಕಿನ ಇಂಚಗೇರಿ ಗ್ರಾಮದ ಬೀರಪ್ಪ ಅರವತ್ತಿ ಅವರ ಬೆಳೆದ ತೊಗರಿ ಬೆಳೆ ಜಮೀನಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ತೊಗರಿ ಬೆಳೆ ಹಾನಿಯಾದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು. ಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿ ಪರಿಹಾರ ನೀಡಲು ಸೂಚಿಸಿದರು. ಹೊರ್ತಿ ಗ್ರಾಮದ ಭೀಮಾಶಂಕರ ಬಾಹುರಾಯ ಪೂಜಾರಿ ಕಬ್ಬು ಬೆಳೆ ಹಾನಿ ಹಾಗೂ ಸಾವಳಸಂಗ ನರೆಗಾ ಯೋಜನೆಯಡಿ ಕಾಮಗಾರಿ ಪರಿಶೀಲನೆ ನಡೆಸಿದರು ಮತ್ತು ಸಾವಳಸಂಗ ಅರಣ್ಯ ಪ್ರದೇಶದಲ್ಲಿ ಸಸಿ ನೆಟ್ಟರು. ಅದೇ ಗ್ರಾಮದ ಶ್ರೀಮತಿ ನೀಲವ್ವ ರೇವಗೊಂಡ ಪಾಟೀಲ ಇವರು ಬೆಳೆದಿರುವ ಸೂರ್ಯಕಾಂತಿ ಬೆಳೆ ಮಳೆ ಇಲ್ಲದೆ ಒಣಗಿರುವುದನ್ನು ವೀಕ್ಷಣೆ ಮಾಡಿದರು. ಇಂಡಿ ತಾಲೂಕಿನ ಹಂಜಗಿ ಕೆರೆ ವೀಕ್ಷಣೆ ಮಾಡಿದರು. ಹಂಜಗಿಯಿಂದ ಆಗಮಿಸಿದ ಸಚಿವರು ತಾಂಬಾದಲ್ಲಿ ರೈತರಿಗೆ ಮೇವಿನ ಕಿಟ್ಟನ್ನು ವಿತರಿಸಿದರು. ಕೊಣ್ಣೂರಿನಲ್ಲಿ ತೊಗರಿ ಬೆಳೆ, ಹೂವಿನ ಹಿಪ್ಪರಗಿಯಲ್ಲಿ ಕಬ್ಬು ಹಾಗೂ ಬಸವನ ಬಾಗೇವಾಡಿ ತಾಲೂಕಿನ ಯರನಾಳದಲ್ಲಿ ಈರುಳ್ಳಿ ಬೆಳೆ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ, ಇಂಡಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.