ಜಿಲ್ಲಾ ಉಸ್ತುವಾರಿ ಸಚಿವರಿಂದ ಆಮ್ಲಜನಕ ಘಟಕಕ್ಕೆ ಚಾಲನೆ

ಚಾಮರಾಜನಗರ, ಏ.30- ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 6000 ಲೀಟರ್ ಸಾಮಥ್ರ್ಯವುಳ್ಳ ಆಮ್ಲಜನಕ (ಎಲ್.ಎಂ.ಒ) ಘಟಕಕ್ಕೆ ಇಂದು ಚಾಲನೆ ನೀಡಿದರು.
ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅವಶ್ಯವಿರುವ ಆಮ್ಲಜನಕ ಪೂರೈಸುವ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್‍ನಿಂದ ಆಮ್ಲಜನಕ ಸೌಲಭ್ಯ ಮತ್ತಷ್ಟು ಸರಾಗವಾಗಿ ದೊರೆಯಲು ಅನುಕೂಲ ಕಲ್ಪಿಸಿದಂತಾಗಿದೆ.
ಉಸ್ತುವಾರಿ ಸಚಿವರು ನಗರದ ಯಡಪುರ ಬಳಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ಮೊದಲ ಎರಡು ಮಹಡಿಯಲ್ಲಿ ಕೋವಿಡ್ ಆಸ್ಪತ್ರೆಯನ್ನು ತುರ್ತಾಗಿ ಆರಂಭಿಸುವ ಸಂಬಂಧ ಕೈಗೊಂಡಿರುವ ಸಿದ್ದತೆಗಳನ್ನು ಪರಿಶೀಲಿಸಿದರು. ತದ ನಂತರ ಸಮೀಪದ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ತಾತ್ಕಲಿಕವಾಗಿ ಕೋವಿಡ್ ಕೇಂದ್ರ ಆರಂಭಿಸಲು ಸಜ್ಜುಗೊಳಿಸಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ನಗರದ ಮಾದಾಪುರದಲ್ಲಿ ಪ್ರಥಮ ದರ್ಜೆ ಕಾಲೇಜು ಕಟ್ಟಡದಲ್ಲಿ ಸಿದ್ದಮಾಡಿರುವ ಕೋವಿಡ್ ಕೇರ್ ಕೇಂದ್ರವನ್ನು ವೀಕ್ಷಿಸಿದರು. ಕೊರೊನಾ ವಾರಿಯರ್ಸ್‍ಗಳಿಗಾಗಿಯೇ ಈ ಕೋವಿಡ್ ಕೇಂದ್ರವನ್ನು ಮೀಸಲಿಡುವ ಉದ್ದೇಶದಿಂದ ವ್ಯವಸ್ಥೆಗಳಿಸಲಾಗಿರುವ ಸಿದ್ದತೆಯನ್ನು ಪರಿಶೀಲನೆ ನಡೆಸಿದರು.
ಕೋವಿಡ್ ಸಂಬಂಧಿ ಪ್ರಕರಣಗಳ ನಿಯಂತ್ರಣ ಹಾಗೂ ಸೋಂಕಿತರಿಗೆ ತುರ್ತಾಗಿ ಚಿಕಿತ್ಸೆ ನೀಡಲು ಕೋವಿಡ್ ಕೇರ್ ಕೇಂದ್ರಗಳ ಕೆಲಸಗಳನ್ನು ಅತ್ಯಂತ ಶೀಘ್ರವಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಸೂಚನೆ ನೀಡಿದರು.
ಶಾಸಕರಾದ ಎನ್. ಮಹೇಶ್, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಜೀವ್, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಭಾಗೀರಥಿ, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಇತರರು ಹಾಜರಿದ್ದರು.