ಜಿಲ್ಲಾ ಆಹಾರ ಇಲಾಖೆ ಪ್ರಭಾವ : ಮಂಡಿಯೂರಿದ ತನಿಖಾ ತಂಡ – ಆಯುಕ್ತರ ಆದೇಶಕ್ಕೂ ಬೆಲೆಯಿಲ್ಲ

ರಾಜಕೀಯ ಪ್ರಭಾವ : ಮುಚ್ಚಿ ಹೋದ ತೊಗರಿ ಬೆಳೆ ಕಾಳಸಂತೆ ಪ್ರಕರಣ
ರಾಯಚೂರು.ಜೂ.೦೩- ಬಡ ಜನರ ಹೊಟ್ಟೆ ತುಂಬುವ ಉದ್ದೇಶದ ಪಡಿತರ ವ್ಯವಸ್ಥೆಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳೇ ಹೆಗ್ಗಣಗಳಾದರೇ, ಇವರಿಗೆ ಸ್ಥಳೀಯ ಜನಪ್ರತಿನಿಧಿಗಳು ರಕ್ಷಕರಾದರೇ, ಯಾರಿಗೆ ದೂರು ನೀಡುವುದು ಎನ್ನುವ ಪ್ರಶ್ನೆ ಈಗ ಮತ್ತೇ ಚರ್ಚೆಗೆ ಬಂದಿದೆ.
ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ ಪ್ರತಿ ತಿಂಗಳು ಪಡಿತರ ವಿತರಣೆಯಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆಯುತ್ತಿದ್ದರೂ, ಸ್ಥಳೀಯ ಮೇಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ಯಾರೆ ಎನ್ನದೇ, ಅಲ್ಲಿಯ ಅಧಿಕಾರಿಗಳ ತಾಳಕ್ಕೆ ಕುಣಿಯುತ್ತಿರುವುದು ಈ ಅವ್ಯವಹಾರದಲ್ಲಿ ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ ಎನ್ನುವುದಕ್ಕೆ ನಿದರ್ಶನವಾಗಿದೆ.
ಜಿಲ್ಲೆಯ ಪಡಿತರದಾರರಿಗೆ ತೊಗರಿ ಬೆಳೆ ಹಂಚಿಕೆಯ ಮೊತ್ತವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ದೂರಿನ ಪ್ರಕರಣಕ್ಕೆ ಸಂಬಂಧಿಸಿ, ಆಯುಕ್ತರು ತನಿಖಾ ತಂಡ ರಚಿಸಿದ್ದರು. ಇಲ್ಲಿಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ಇಲ್ಲಿಗೆ ತಂಡ ಭೇಟಿ ನೀಡದಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಆಯುಕ್ತರೇ ಸ್ಥಳೀಯ ಅಧಿಕಾರಿಗಳ ಮುಂದೆ ನಿಸ್ಸಾಹಾಯಕರಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರ್ಚ್ ೧೫ ರಂದು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ರಾಜ್ಯಾಯುಕ್ತರು ಡಾ.ಕೆ.ರಾಮೇಶ್ವರಪ್ಪ, ಜಂಟಿ ನಿರ್ದೇಶಕರು (ಐಟಿ) ಇವರ ನೇತೃತ್ವದಲ್ಲಿ ಒಟ್ಟು ಆರು ಜನರ ತನಿಖಾ ಸಮಿತಿಯೊಂದನ್ನು ರಚಿಸಿರುತ್ತಾರೆ. ಈ ಸಮಿತಿಯಲ್ಲಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರವೀಣ್ ಬರಗಲ್ಲ, ಆಹಾರ ಶಿರಸ್ತೆದಾರರುಗಳಾದ ಟಿ.ಮಹೇಶ, ರವಿ ರಾಥೋಡ್, ಶರಣಬಸ್ಸಯ್ಯ ಮತ್ತು ಆತ್ರೇಯಾ ಪುರಾಣಿಕ್ ಇವರು ಸದಸ್ಯರಾಗಿದ್ದಾರೆ. ಮಾರ್ಚ್ ೧೭ ರಿಂದ ೨೦ ರವರೆಗೆ ಜಿಲ್ಲೆಗೆ ಭೇಟಿ ನೀಡಿ, ತನಿಖೆ ನಡೆಸುವಂತೆ ಸೂಚಿಸಿದ್ದರು.
ಆದರೆ, ಈ ತಂಡ ಕಳೆದ ಎರಡು ತಿಂಗಳಿಂದ ಜಿಲ್ಲೆಯತ್ತ ಬಾರದಂತೆ ಲಕ್ಷ್ಮಣ ರೇಖೆ ಎಳೆಯುವಲ್ಲಿ ಸ್ಥಳೀಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ಪ್ರಭಾವ ಬೀರಿದ್ದಾರೆ. ಆಹಾರ ಇಲಾಖೆಯ ನಿರೀಕ್ಷಿಕರಾದ ಬಿ.ಆರ್.ವೆಂಕಣ್ಣ ಅವರ ವರ್ಗಾವಣೆಗೆ ಆಯುಕ್ತರೇ ನೀಡಿದ ಆದೇಶಕ್ಕೆ ಕವಡೆ ಕಿಮ್ಮತ್ತು ಇಲ್ಲದಂತೆ ಮಾಡುವ ಪ್ರಭಾವ ಆಹಾರ ಇಲಾಖೆಯ ಅಧಿಕಾರಿಗಳಿಗೆ ಇದೆ ಎನ್ನುವುದು ಸಾಬೀತು ಮಾಡಿ ತೋರಿಸಿದಂತಾಗಿದೆ. ಇಂತಹ ಪ್ರಭಾವಿ ಅಧಿಕಾರಿಗಳ ಮುಂದೆ ಜಿಲ್ಲಾಧಿಕಾರಿಗಳೂ ಕೈಕಟ್ಟಿ ಕೂತು, ಆಹಾರ ಇಲಾಖೆಯಲ್ಲಿ ಏನೂ ನಡೆದರೂ ಕಣ್ಮುಚ್ಚಿ ಕುಳಿತುಕೊಳ್ಳುವ ಸೂಚನೆ ಜಾರಿಗೊಂಡಂತಿವೆ.
ತನಿಖಾಧಿಕಾರಿ ಡಾ.ಕೆ.ರಾಮೇಶ್ವರಪ್ಪ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ತನಿಖೆ ವಿಷಯಕ್ಕೆ ಸಂಬಂಧಿಸಿ, ಏನನ್ನು ಹೇಳದ ಪರಿಸ್ಥಿತಿ ಈ ಹಿಂದೆ ನಿರ್ಮಾಣವಾಗಿತ್ತು. ಕಳೆದ ಎರಡು ತಿಂಗಳಿಂದ ಸ್ವತಃ ಇಲಾಖೆಯ ಆಯುಕ್ತರು ತನಿಖೆಗೆ ತಂಡ ತೆರಳುವಂತೆ ಆದೇಶಿಸಿದ್ದರೂ, ಬರಲು ಸಿದ್ಧವಿಲ್ಲ. ಆಹಾರ ಇಲಾಖೆಯ ಸಚಿವಾಲಯವೇ ಈಗ ಜಿಲ್ಲಾ ಆಹಾರ ಇಲಾಖೆಯ ಅಧಿಕಾರಿಗಳ ಕೈಯಲ್ಲಿ ಇದೆಯೇ ಎನ್ನುವಂತೆ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ. ತೊರಗಿ ಬೆಳೆ ಕಾಳಸಂತೆ ಮಾರಾಟದ ಪ್ರಕರಣ ಒಂದೆಡೆಯಾದರೇ, ಮತ್ತೊಂದೆಡೆ ಕೊರೊನಾ ಸಂದರ್ಭದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ವಿತರಿಸಬೇಕಾಗಿದ್ದ ಅಕ್ಕಿ, ಗೋಧಿ ವಿತರಣೆಯಲ್ಲಿಯೂ ಭಾರೀ ವಿಳಂಬ ಮಾಡಲಾಯಿತು.
ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರಿಗೆ ನೀಡಬೇಕಾದ ಈ ಪಡಿತರದಲ್ಲೂ ಸಮರ್ಪಕ ವಿತರಣೆ ಮಾಡಬೇಕಾದ ದೂರುಗಳು ಕೇಳಿ ಬರುತ್ತಿವೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಮೇ ಆರಂಭದಲ್ಲಿಯೇ ಪಡಿತರ ವಿತರಿಸಿದರೇ, ಜಿಲ್ಲೆಯಲ್ಲಿ ಮಾತ್ರ ಮೇ.೨೦ ರವರೆಗೂ ಪಡಿತರ ವಿತರಣೆ ಪ್ರಕ್ರಿಯೆ ಆರಂಭಗೊಳ್ಳದಿರುವುದು ಗಮನಾರ್ಹವಾಗಿತ್ತು. ಜನರ ಬೇಡಿಕೆಗನುಗುಣವಾಗಿ ಪಡಿತರ ವಿತರಿಸುವ ಬದಲು, ಆಹಾರ ಇಲಾಖೆಯ ಅಧಿಕಾರಿಗಳಿಗೆ ಅನುಕೂಲವಿದ್ದಾಗ ಪಡಿತರ ವಿತರಿಸುವ ವ್ಯವಸ್ಥೆ ಜಿಲ್ಲೆಯಲ್ಲಿದೆ. ಆಹಾರ ಇಲಾಖೆಯಲ್ಲಿ ಏನೆಲ್ಲಾ ನ್ಯೂನ್ಯತೆಗಳಿದ್ದರೂ, ಈ ಬಗ್ಗೆ ಕ್ರಮ ಕೈಗೊಳ್ಳುವ ತಾಕತ್ತು ಯಾರಿಗೂ ಇಲ್ಲದಂತಹ ಪ್ರಭಾವ ಇಲ್ಲಿಯ ಅಧಿಕಾರಿಗಳದ್ದಾಗಿದೆ.
ಬಡ ಕುಟುಂಬಗಳ ಹಸಿವು ನೀಗಿಸುವ ಈ ಯೋಜನೆ ಜಿಲ್ಲೆಯಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಒಳ ಒಪ್ಪಂದದಿಂದಾಗಿ ಎಲ್ಲವೂ ಗೋಲ್ ಮಾಲ್ ಎನ್ನುವ ಅಪವಾದಕ್ಕೆಡೆಯಾಗಿದೆ. ಈಗಾಗಲೇ ಬೆಳೆಗೆ ಸಂಬಂಧಿಸಿ ದೂರುಗಳ ಬಗ್ಗೆ ತನಿಖೆ ನಡೆಸಿ, ಆಹಾರ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರದ ಸತ್ಯಾಸತ್ಯತೆ ಬಗ್ಗೆ ಹೊರ ಹಾಕದಿದ್ದರೇ, ಜನರಿಗೆ ಆಹಾರ ಇಲಾಖೆಯ ಮೇಲೆ ವಿಶ್ವಾಸ ಮೂಡುವುದಾದರೂ ಹೇಗೆ?.ಎನ್ನುವುದೇ ಇಲ್ಲಿ ಯಕ್ಷಪ್ರಶ್ನೆಯಾಗಿದೆ.