ಜಿಲ್ಲಾ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ನ.೨೧ ಕ್ಕೆ ಧರಣಿ

ದಾವಣಗೆರೆ.ನ.೧೯; : ಸಾರ್ವಜನಿಕ, ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ದಾವಣಗೆರೆ ಜಿಲ್ಲಾ ಆಸ್ಪತ್ರೆಯನ್ನು ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ದಾವಣಗೆರೆಯ ಚಿಗಟೇರಿ ಆಸ್ಪತ್ರೆ ಖಾಸಗೀಕರಣ ವಿರೋಧಿ ಹೋರಾಟ ಸಮಿತಿ ಇದೇ ನ 21 ರಂದು  ಬೆಳಗ್ಗೆ 11 ಗಂಟೆಗೆ ಜಯದೇವ ವೃತ್ತದಿಂದ ಚಿಗಟೇರಿ ಸಾರ್ವಜನಿಕ ಜಿಲ್ಲಾಸ್ಪತ್ರೆಯವರೆಗೂ ಮೆರವಣಿಗೆಯ ಮೂಲಕ ಸಾಗಿ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಂಡಿದೆ.ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ  ಮಾತನಾಡಿದ ಸಮಿತಿಯ ಸಂಚಾಲಕ ಆವರಗೆರೆ ಚಂದ್ರು, ಸರ್ಕಾರದ ಧೋರಣೆ ವಿರೋಧಿಸಿ ಚಿಗಟೇರಿ ಆಸ್ಪತ್ರೆಯನ್ನು ಉಳಿಸಿ ಬಡವರ ಜೀವಗಳನ್ನು ರಕ್ಷಿಸಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು. ನೀತಿ ಆಯೋಗದ ಶಿಫಾರಸ್ಸಿನಂತೆ ರಾಜ್ಯದ ಇನ್ನೂ ಹಲವು ಸರ್ಕಾರಿ ಜಿಲ್ಲಾ ಆಸ್ಪತ್ರೆಗಳನ್ನು ಪಿಪಿಪಿ ಮಾದರಿಯಲ್ಲಿ ಖಾಸಗಿಯವರಿಗೆ ಹಸ್ತಾಂತರ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.ವಿಚಾರವಾದಿ ಪ್ರೋ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಜನಪರವಾಗಿ ಕೆಲಸ ಮಾಡಬೇಕಾದ ಸರ್ಕಾರಗಳು ಅದರ ಬದಲಿಗೆ ಹಣವಂತರ ಸೇವೆ ಮಾಡುತ್ತಿರುವುದು ಖಂಡನೀಯ. ಪ್ರಸ್ತುತ ದಿನಗಳಲ್ಲಿ ಆರೋಗ್ಯ ಸೇವೆ ಹಾಗೂ ಚಿಕಿತ್ಸಾ ವೆಚ್ಚಗಳು ದಿನೇ ದಿನೇ ದುಬಾರಿಯಾಗುತ್ತಿದ್ದು ಖರ್ಚು ಭರಿಸಲಾಗದೆ ಎಷ್ಟೋ ಜನರು ಸಾವನ್ನಪ್ಪುತ್ತಿದ್ದಾರೆ. ಶ್ರೀ ಸಾಮಾನ್ಯರಿಗೆ ಉಚಿತವಾಗಿ ಸಿಗಬೇಕಿದ್ದ ಆರೋಗ್ಯ ಸೇವೆ ಇಂದು ಹಣವಿದ್ದವರಿಗೆ ಮಾತ್ರ ದೊರಕುವಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ದೊರಕುತ್ತಿದ್ದ ಕನಿಷ್ಠ ಆರೋಗ್ಯ ಸೇವೆಯನ್ನು ನಾಶಪಡಿಸಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಉತ್ತಮ ಗುಣಮಟ್ಟದ ಸೇವೆಯೆಂಬ ನೆಪವೊಡ್ಡಿ ಇಡೀ ಆಸ್ಪತ್ರೆಯ ವ್ಯವಸ್ಥೆಯನ್ನೇ ಖಾಸಗಿಯವರ ಕೈಗೊಪ್ಪಿಸುವ ರಾಜಕೀಯ ಕುತಂತ್ರ ಇದರಲ್ಲಿ ಅಡಗಿದೆ. ಇದನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು.ಒಬ್ಬ ಖಾಸಗಿ ವ್ಯಕ್ತಿ ಅಥವಾ ಖಾಸಗಿ ಸಂಸ್ಥೆಯು ಜಿಲ್ಲಾಸ್ಪತ್ರೆಯನ್ನು ನಿರ್ವಹಿಸಲು ಸಾಧ್ಯ ಎಂದ ಮೇಲೆ ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ. ಇದು ರಾಜಕೀಯ ಇಚ್ಛಾಶಕ್ತಿಯ ಕೊರತೆಯಷ್ಟೆ. ಜಿಲ್ಲೆಗೆ ವೈದ್ಯಕೀಯ ಕಾಲೇಜು ಶೇ.100ರಷ್ಟು ಸರ್ಕಾರಿ ಸ್ವಾಮ್ಯದ ಕಾಲೇಜು ಆಗಬೇಕು. ಈಗ ಪ್ರಸ್ತಾಪದಲ್ಲಿ ಬಂದಿರುವ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಆಸ್ಪತ್ರೆಯನ್ನು ಒಳಗೊಂಡು ಖಾಸಗಿಯವರ ಸಹ ಭಾಗಿತ್ವ ಒಪ್ಪಲು ಸಾಧ್ಯವಿಲ್ಲ. ಈಗಿನ ವ್ಯವಸ್ಥೆಯನ್ನು ಇನ್ನೂ ಸುಸಜ್ಜಿತಗೊಳಿಸಿ ಉತ್ತಮ ಚಿಕಿತ್ಸೆ ಹಾಗೂ ಉಚಿತ ಪರೀಕ್ಷೆಗಳನ್ನು ಖಾತ್ರಿಪಡಿಸಿ, ಜನಸಾಮಾನ್ಯರಿಗೆ ಕೈಗೆಟಕುವಂತೆ ಉತ್ತಮ ಆರೋಗ್ಯ ಸೇವೆಯನ್ನು ನೀಡಬೇಕೆಂದು ಒತ್ತಾಯಿಸಿದರು. ಸರ್ಕಾರವು ಚಿಗಟೇರಿ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯನ್ನು ಪಿ.ಪಿ.ಪಿ. ಮಾದರಿಯಲ್ಲಿ ಖಾಸಗೀಕರಣ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಜಿಲ್ಲಾ ಆಸ್ಪತ್ರೆಯ ಅಭಿವೃದ್ಧಿಗಾಗಿ ಹೆಚ್ಚು ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕು. ಇದಲ್ಲದೇ ಪೂರ್ತಿ ಸರ್ಕಾರಿ ಸ್ವಾಮ್ಯದ ಮಡಿಕಲ್ ಕಾಲೇಜನ್ನು ದಾವಣಗೆರೆಗೆ ಕೂಡಲೇಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಟಿಯಲ್ಲಿ ಕಂದಗಲ್ ಚಂದ್ರಪ್ಪ, ಜಬೀನಾಖಾನಂ, ಘನಿತಾಹೀರ್, ಸರೋಜ, ಮಹಮ್ಮದ್ ಹಯಾತ್, ಆದಿಲ್ ಖಾನ್, ಮಧು ತೋಗಲೇರಿ,  ಇ.ಶ್ರೀನಿವಾಸ್, ಕರಿಬಸಪ್ಪ ಇತರರು ಇದ್ದರು.