
(ಸಂಜೆವಾಣಿ ವಾರ್ತೆ)
ಹಾವೇರಿ,ಆ8 : ಪ್ರಸಕ್ತ ಸಾಲಿನ ಪ್ರಥಮ ವರ್ಷದ ವೈದ್ಯಕೀಯ ತರಗತಿಗಳು ನೂತನ ಕಟ್ಟಡದಲ್ಲಿ ಆರಂಭಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ತಿಳಿಸಿದರು.
ಹಾವೇರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಾಮಗಾರಿಗಳ ಪರಿವೀಕ್ಷಣೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾವೇರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಾಮಗಾರಿ ನಿಗದಿತ ಅವದಿಯೊಳಗೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಸೆಪ್ಟೆಂಬರ್ ಮಾಹೆಯಿಂದ ಪ್ರಥಮ ವರ್ಷದ ವೈದ್ಯಕೀಯ ತರಗತಿಗಳು ಈ ಕಟ್ಟಡದಲ್ಲಿ ಆರಂಭಿಸಲಾಗುವುದು. ಪೂರ್ಣ ಪ್ರಮಾಣದಲ್ಲಿ ವೈದ್ಯಕೀಯ ಕಾಲೇಜು ಆರಂಭವಾದರೆ ಈ ಜಿಲ್ಲೆಗೆ ಮೆರಗು ಬರಲಿದೆ ಎಂದರು.
ಹಾವೇರಿ ನೂತನ ಸರ್ಕಾರಿ ವೈದ್ಯಕೀಯ ಕಾಲೇಜ್ ಕಟ್ಟಡದಲ್ಲಿ ತರಗತಿ ಆರಂಭಿಸುವ ಕುರಿತಾಗಿ ಎ ಮತ್ತು ಬಿ ಬ್ಲಾಕ್ ನಿರ್ಮಾಣ ಕಾರ್ಯವನ್ನು ಆಗಸ್ಟ್ – ಸೆಪ್ಟೆಂಬರ್ ಮಾಹೆಯಲ್ಲಿ ಪೂರ್ಣಗೊಳಿಸಿ ಹಸ್ತಾಂತರಿಸಲು ಆರೋಗ್ಯ ಇಲಾಖೆ ಅಭಿಯಂತರರಿಗೆ ಸೂಚಿಸಲಾಗಿತ್ತು. ಪ್ರಥಮ ವೈದ್ಯಕೀಯ ತರಗತಿಗೆ ಅಗತ್ಯವಾದ ಕೊಠಡಿಗಳನ್ನು ಆಗಸ್ಟ್ ತಿಂಗಳಾಂತ್ಯಕ್ಕೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ. ಎರಡನೇ ವರ್ಷದ ಎಂ.ಬಿ.ಬಿ.ಎಸ್. ತರಗತಿಗಳನ್ನು ಈ ಕಟ್ಟಡ ಸಿದ್ಧವಾಗುವವರೆಗೂ ತಾತ್ಕಾಲಿಕವಾಗಿ ಸರ್ಕಾರಿ ಇಂಜನೀಯರಿಂಗ್ ಕಾಲೇಜಿನಲ್ಲೇ ಮುಂದುವರಿಸಲಾಗುವುದು. ಪ್ರಥಮ ವರ್ಷದ ವಿದ್ಯಾರ್ಥಿಗಳ ಬೋಧನೆಗೆ ಹಾಗೂ ಎರಡನೇ ವರ್ಷದ ತರಗತಿಗೆ ಎಂಟು ಕೊಠಡಿಗಳು ಅವಶ್ಯವಿದೆ. ಜೊತೆಗೆ ಪ್ರಯೋಗಾಲಯದ ಅವಶ್ಯವಿದೆ. ಡಿಸೆಂಬರ್ ಮಾಹೆಯೊಳಗೆ ಕಟ್ಟಡ ಪೂರ್ಣಗೊಂಡು ಉದ್ಘಾಟಿಸುವ ಇರಾದೆ ಇದೆ ಎಂದರು.
ಕೆಲ ವೈದ್ಯಕೀಯ ಕಾಲೇಜುಗಳಲ್ಲಿ ನಿಗದಿತ ಯೋಜನೆಗಿಂತ ಯಾವುದೇ ಅನುಮೋದನೆ ಪಡೆಯದೇ ರೂ.150 ಕೋಟಿಗೂ ಹೆಚ್ಚು ಹಣ ಬಳಕೆ ಮಾಡಿರುವುದು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಹಾವೇರಿ ಕಾಲೇಜು ಸೇರಿದಂತೆ ನಾಲ್ಕು ವೈದ್ಯಕೀಯ ಕಾಲೇಜುಗಳ ವಿಚಾರಣೆ ಮಾಡಲಾಗುತ್ತಿದೆ. ಹಾವೇರಿ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ಸ್ಥಗಿತಗೊಳಿಸದಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಕಾಮಗಾರಿಗೆ ಯಾವುದೇ ಅನುದಾನದ ಕೊರತೆ ಇಲ್ಲದಂತೆ ಬಿಡುಗಡೆಗೆ ಪ್ರಯತ್ನಿಸುವುದಾಗಿ ತಿಳಿಸಿದರು.
ಜಿಲ್ಲಾ ಆಸ್ಪತ್ರೆ ಕಾಮಗಾರಿ ವೀಕ್ಷಣೆ: ಜಿಲ್ಲಾ ಆಸ್ಪತ್ರೆ ತಾಯಿ-ಮಕ್ಕಳ ವಿಭಾಗದ ವಾರ್ಡ್ಗಳ ಮೇಲ್ಚಾವಣಿ ಸೋರಿಕೆ ದುರಸ್ತಿ ಕಾಮಗಾರಿ ವೀಕ್ಷಿಸಿ ಬೇಸರ ವ್ಯಕ್ತಪಡಿಸಿದ ಸಚಿವರು, ಆರೋಗ್ಯ ಇಲಾಖೆ ಅಭಿಯಂತರ ಸುರೇಶ ಅವರಿಗೆ ಗುಣಮಟ್ಟದ ಹಾಗೂ ನೀಟಾಗಿ ಕಾಮಗಾರಿ ಕೈಗೊಳ್ಳುವಂತೆ ತಾಕೀತುಮಾಡಿದರು.
ಇದೇ ಸಂದರ್ಭದಲ್ಲಿ ಕಾಮಗಾರಿ ಗುತ್ತಿಗೆದಾರ ಶ್ರೀನಿವಾಸ ಗೈರುಹಾಜರಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ನೋಟೀಸ್ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ.ಬಣಕಾರ, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಗುಣಾರೆ, ವೈದ್ಯಕೀಯ ಕಾಲೇಜು ಡೀನ್ ಉದಯ ಮುಳಗುಂದ ಉಪಸ್ಥಿತರಿದ್ದರು.