ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶು ಸಂರಕ್ಷಣಾ ಕಾರ್ಯಕ್ರಮ

ಕೋಲಾರ, ಮಾ.೧೨- ನಗರದ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶು ಸಂರಕ್ಷಣಾ ಕಾರ್ಯಕ್ರಮವನ್ನು ರಾಷ್ಟ್ರೀಯ ಐಎಪಿ ಮತ್ತು ರಾಷ್ಟ್ರೀಯ ಎನ್‌ಎನ್‌ಎಫ್ ಸಹಯೋಗದಲ್ಲಿ ವಿಶೇಷವಾಗಿ ಏರ್ಪಡಿಸಲಾಗಿತ್ತು.
ನವಜಾತ ಶಿಶುವಿನ ಬೆಳವಣಿಗೆ ಆರೋಗ್ಯ ಸಂರಕ್ಷಣೆ ಮತ್ತು ಆರೈಕೆ ಕುರಿತಾಗಿ ವಿಶೇಷ ತಜ್ಞ ವೈದ್ಯರಿಂದ ತರಬೇತಿ ಉಪನ್ಯಾಸ ಕಾರ್ಯಕ್ರಮ ಸಹ ನೆರವೇರಿತು. ೪೮ ವಿದ್ಯಾರ್ಥಿಗಳಿಗೆ ನವಜಾತ ಶಿಶುವಿನ ಕುರಿತಾಗಿ ಸಂಪೂರ್ಣ ವೈದ್ಯಕೀಯ ಮಾಹಿತಿಗಳನ್ನು ನೀಡುವ ಮೂಲಕ ಮತ್ತು ಪರಿಪೂರ್ಣ ತರಬೇತಿಯನ್ನ ನೀಡುವ ಮೂಲಕ ಸರ್ಟಿಫಿಕೇಟ್‌ಗಳನ್ನು ಸಹ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾಜ್ಯ ನೋಡಲ್ ಅಧಿಕಾರಿ ಡಾ.ವೀಣಾ, ಡಿಎಚ್‌ಓ ಡಾ.ಜಗದೀಶ್, ಡಿಸ್ಟ್ರಿಕ್ಟ್ ಸರ್ಜನ್ ಡಾ.ವಿಜಯ್‌ಕುಮಾರ್, ಮಕ್ಕಳ ತಜ್ಞರಾದ ಡಾ.ವೈ.ಸಿ ಬೀರೇಗೌಡ, ಡಾ.ಪ್ರಶಾಂತ್, ಡಾ.ಸುಧಾರೆಡ್ಡಿ, ಡಾ.ಜಗದೀಶ್ ಸೋಮಣ್ಣ, ಡಾ.ಶಶಿಧರ್, ಡಾ.ಬಾಲಸುಂದರ್, ಡಾ.ಶ್ರೀಹರಿ, ಡಾ.ಶ್ರೀನಾಥ್ ರವರನ್ನು ಒಳಗೊಂಡ ವೈದ್ಯರ ತಂಡ ಭಾಗಿಯಾಗಿತ್ತು.
ರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಆರೋಗ್ಯ ಸಂರಕ್ಷಣೆಯ ವಿಚಾರವಾಗಿ ವಿನೂತನವಾಗಿ ಈ ಕಾರ್ಯಕ್ರಮ ನೆರವೇರಿತು ಮತ್ತು ಯಶಸ್ವಿಯಾಯಿತು.
ಸಾಮಾಜಿಕ ಬದ್ಧತೆಯಿಂದ ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಗೆ ಬರುವ ಶಿಶುಗಳಿಗೆ ಉತ್ತಮ ಮತ್ತು ಆಧುನಿಕ ಚಿಕಿತ್ಸೆ ನೀಡುವ ಬಹುಪಯೋಗಿ ಕೆಲಸ ಇದಾಗಿದೆ. ಗ್ರಾಮೀಣ ಭಾಗಕ್ಕೂ ಸಹ ತರಬೇತಿ ಪಡೆದ ೪೮ ತಜ್ಞರ ತಂಡ ಭೇಟಿ ನೀಡುವ ಮೂಲಕ ಗ್ರಾಮೀಣ ಭಾಗದ ಮಕ್ಕಳ ಆರೋಗ್ಯ ಸಂರಕ್ಷಣೆಯಲ್ಲಿ ವಿಶೇಷವಾದ ಪಾತ್ರವನ್ನು ವಹಿಸಲಿದ್ದಾರೆ.