
ಕೋಲಾರ,ಆ,೧೧-ನರ್ಸ್‌ಗಳನ್ನು ಕುರಿತು ಕನ್ನಡ ಚಿತ್ರವೊಂದರ ಹಾಡಿಗೆ ರೀಲ್ಸ್ ಮಾಡಿ ಕಿಮ್ಸ್ ಹುಬ್ಬಳ್ಳಿ ವೈದ್ಯಕೀಯ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಹಿನ್ನೆಲೆ ನರ್ಸ್‌ಗಳಿಗೆ ಅಪಮಾನ ಮಾಡಿದೆ. ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕ ಸರ್ಕಾರಿ ಶುಶ್ರೂಷಾಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದಿಂದ ನಗರದ ಎಸ್ ಎನ್ ಆರ್ ಜಿಲ್ಲಾಸ್ಪತ್ರೆ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯ್ ಕುಮಾರ್ ಮೂಲಕ ಆರೋಗ್ಯ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕರ್ನಾಟಕ ಸರ್ಕಾರಿ ಶುಶ್ರೂಷಾಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷೆ ಎಸ್.ವಿಜಯಲಕ್ಷ್ಮಿ ಮಾತನಾಡಿ, ವಿಡಿಯೋವನ್ನು ನರ್ಸ್‌ಗಳನ್ನು ಅಸಭ್ಯವಾಗಿ, ಅಗೌರವಿಸುವ ರೀತಿಯಲ್ಲಿ ಮಾಡಲಾಗಿದೆ. ಈ ಮೂಲಕ ನರ್ಸ್‌ಗಳಿಗೆ ಅವಮಾನ ಮಾಡಲಾಗಿದ್ದು, ರಾಜ್ಯದೆಲ್ಲೆಡೆ ವಿಡಿಯೋ ವೈರಲ್ ಆಗಿದೆ. ಕೂಡಲೇ ಅವಮಾನ ಮಾಡಿದ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದರು.
ದಾದಿಯರು ಪ್ರತಿ ರೋಗಿಯನ್ನು ತಮ್ಮ ಸ್ವಂತ ಕುಟುಂಬದ ವ್ಯಕ್ತಿಯಂತೆ ಭಾವಿಸಿ ಆರೈಕೆ ಮಾಡುತ್ತಾರೆ. ಪ್ರೀತಿ, ವಾತ್ಸಲ್ಯದಿಂದ ರೋಗ ಗುಣಪಡಿಸಲು ಮುಂದಾಗುತ್ತಾರೆ. ಅಂತಹವರ ಕರ್ತವ್ಯ ಹೀಯಾಳಿಸುವ ರೀತಿ ವೈದ್ಯಕೀಯ ವಿದ್ಯಾರ್ಥಿಗಳು ರೀಲ್ಸ್ ಮಾಡಿರುವುದು ಖಂಡನೀಯ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಶ್ರೂಷಾಧಿಕಾರಿಗಳು ಚುಚ್ಚುಮದ್ದು ನೀಡುವುದು ಹೇಗೆ ಎಂದು ಕಲಿಸಿರುತ್ತಾರೆ. ಅವರಿಗೆ ವಿದ್ಯೆ ಕಲಿಸಿಕೊಟ್ಟ ನರ್ಸುಗಳ ಮಾನತೆಗೆಯುವ ಕೆಲಸವನ್ನು ಮಾಡಿರುವುದು ವಿಷಾದನೀಯವೆಂದು ಆಕ್ರೋಶ ವ್ಯಕ್ತಪಡಿಸಿದರು.