ಜಿಲ್ಲಾಸ್ಪತ್ರೆಯ ನೂತನ ಕಣ್ಣಿನ ವಿಭಾಗ ಉದ್ಘಾಟನೆ : ಸಿಬ್ಬಂದಿಗಳಿಗೆ ಸನ್ಮಾನ

ವಿಜಯಪುರ ಜ.25: ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ರಾಜ್ಯದ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಜಿಲ್ಲಾ ಆಸ್ಪತ್ರೆ ವಿಜಯಪುರ ಒಂದಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ವಿಜಯಪುರ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಆರೋಗ್ಯ ರಕ್ಷಾ ಸಮಿತಿ ಕಾರ್ಯಕಾರಿಣಿ ಸಭೆ, ಆಸ್ಪತ್ರೆಯ ನೂತನ ಕಣ್ಣಿನ ವಿಭಾಗದ ಉದ್ಘಾಟನೆ ಹಾಗೂ ಸಿಬ್ಬಂದಿಗಳಿಗೆ ಸನ್ಮಾನಿಸಿ ಅವರು ಮಾತನಾಡಿ, ವಿಜಯಪುರ ಸತತ ಎರಡು ಬಾರಿ ಕಾಯಕಲ್ಪ ಪ್ರಶಸ್ತಿ ಪಡೆದು ಎರಡು ಬಾರಿ ರನ್ನರ್ ಅಪ್ ಹಾಗೂ ನ್ಯಾಶನಲ್ ಕ್ವಾಲಿಟಿ ಅಸೂರೆನ್ಸ್ ಗುಣಮಟ್ಟದ ಪ್ರಶಸ್ತಿ ಪಡೆದಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಜಿಲ್ಲಾ ಆಸ್ಪತ್ರೆ ಸಾರ್ವಜನಿಕರಿಗೆ ಯಾವುದೇ ಕೊರತೆಯಾಗದಂತೆ ನಿರಂತರವಾಗಿ ಉತ್ತಮ ಸೇವೆ ಒದಗಿಸುವಂತೆ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಆಸ್ಪತ್ರೆಯಲ್ಲಿನ ಸ್ವಚ್ಛತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಆರ್.ಎಂ.ಓ ಡಾ.ಸಿ.ವಾಯ್.ರಾಠೋಡ ಸೇರಿದಂತೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಹಾಗೂ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಇದ್ದರು.