ಜಿಲ್ಲಾಸ್ಪತ್ರೆಗೆ ಶಾಸಕ ಪ್ರದೀಪ್ ಭೇಟಿ ಪರಿಶೀಲನೆ

ಚಿಕ್ಕಬಳ್ಳಾಪುರ.ಅ೨೬:ಜಿಲ್ಲಾಸ್ಪತ್ರೆಯ ಅವ್ಯವಸ್ಥೆಗಳ ಕುರಿತು ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಪ್ರದೀಪ್ ಈಶ್ವರ್, ಅಧಿಕಾರಿಗಳೊಂದಿಗೆ ಗುಪ್ತ ಸಭೆಯೊಂದನ್ನು ನಡೆಸಿ ಸಮಸ್ಯೆಗಳ ಕುರಿತು ಚರ್ಚಿಸಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಸೇವೆ ಒದಗಿಸಲು ಲಂಚಕ್ಕೆ ಬೇಡಿಕೆಯೊಡ್ಡುವುದಾಗಲೀ, ಕರ್ತವ್ಯದಲ್ಲಿ ಯಾವುದೇ ಲೋಪಗಳು ಕಂಡುಬಂದಲ್ಲಿ ಸಾಕ್ಷಾಧಾರಗಳ ಸಮೇತ ದೂರು ನೀಡಿದಲ್ಲಿ ಸಂಬಂಧಿಸಿದ ವೈದ್ಯರನ್ನು ಸ್ಥಳದಲ್ಲಿಯೇ ವಜಾಗೊಳಿಸಲಾಗುವುದು. ಅಲ್ಲದೆ ಬಡವರಿಗೆ ವೈದ್ಯಕೀಯ ಸೇವೆ ಒದಗಿಸುವಲ್ಲಿ ನಿರ್ಲಕ್ಷ್ಯ ತೋರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರೀತಿಯಿಂದ ನೀಡಿದರೂ ನಿರಾಕರಿಸಿ!
ಅಲ್ಲದೆ ಆಸ್ಪತ್ರೆಯಲ್ಲಿನ ಕೆಲ ಡಿ-ಗ್ರೂಪ್ ನೌಕರರಿಂದ ಲಂಚದ ಆರೋಪಗಳು ಕೇಳಿಬರುತ್ತಿದ್ದು, ಇದರಿಂದ ಇಡೀ ವೈದ್ಯರಿಗೆ ಕಳಂಕ ಅಂಟುತ್ತಿದೆ. ಆದ್ದರಿಂದ ಕೂಡಲೇ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ೮ ಮಂದಿ ಡಿ-ಗ್ರೂಪ್ ನೌಕರರನ್ನು ಬೇರೆಯ ವಿಭಾಗಕ್ಕೆ ಹಾಕುವ ಜೊತೆಗೆ ಎಲ್ಲ ಡಿ-ಗ್ರೂಪ್ ನೌಕರರನ್ನು ಅದಲು ಬದಲು ಮಾಡಲು ಸೂಚಿಸಲಾಗಿದೆ. ಅಲ್ಲೆಇನ್ನು ಮುಂದೆ ರೋಗಿಗಲು ಪ್ರೀತಿಯಿಂದ ಹಣ ನೀಡಿದರೂ ನಿರಾಕರಿಸುವಂತೆ ವೈದ್ಯರಿಗೆ ತಿಳಿಸಿರುವೆ ಎಂದು ನುಡಿದರು.
ಗಲಾಟೆ ಮಾಡಿದರೆ ಅರೆಸ್ಟ್!
ಇತ್ತೀಚಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಮೇಲೆ ಕಾರಣವಿಲ್ಲದೆ ಅವರನ್ನು ದೂಷಿಸುವುದು, ಹಲ್ಲೆ ನಡೆಸಲು ಯತ್ನಿಸುವ ಪ್ರಕರಣಗಳು ನಡೆಯುತ್ತಿವೆ. ಆದ್ದರಿಂದ ಹೋಮ್ ಗಾರ್ಡ್ಸ್ನ ೧೦ ಮಂದಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಅಲ್ಲದೆ ವೈದ್ಯರಿಂದ ಲೋಪಗಳು ಆದಲ್ಲಿ ದೂರು ನೀಡಬೇಕು. ಇದನ್ನು ಹೊರತುಪಡಿಸಿ ಕಾನೂನು ಕೈಗೆತ್ತಿಕೊಂಡಲ್ಲಿ ಯಾವುದೇ ರೀತಿಯ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಬಂಧಿಸುವಂತೆ ಸೂಚಿಸಲಾಗಿದೆ ಎಂದರು.
ಒಬ್ಬರು ಸಹಾಯಕರಿಗೆ ಅವಕಾಶ!
ಸರ್ಕಾರಿ ಆಸ್ಪತ್ರೆ ಎಂದರೆ ಎಲ್ಲರಿಗೂ ಅಸೆಡ್ಡೆಯ ಮನೋಭಾವವಿದ್ದು, ಇದರಿಂದ ಒಬ್ಬ ರೋಗಿಯೊಂದಿಗೆ ಹತ್ತಾರು ಮಂದಿಯು ಆಗಮಿಸುತ್ತಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಸ್ವಚ್ಛತೆಯು ಸೇರಿ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ ಮಾದರಿಯಲ್ಲಿ ಮುಂದಿನ ೧೫ ದಿನಗಳಲ್ಲಿ ರೋಗಿಯೊಂದಿಗೆ ಒಬ್ಬ ಸಹಾಯಕರಿಗೆ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಒಂದು ತಿಂಗಳಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಹಳೆಯ ಜಿಲ್ಲಾಸ್ಪತ್ರೆಗೆ ಸ್ಥಳಾಂತರಗೊಳ್ಳಲಿದ್ದು, ಇದರಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿ ಕೆಲಸದ ಹೊರೆಯು ಕಡಿಮೆಯಾಗಲಿದೆ. ಜೊತೆಗೆ ಆಸ್ಪತ್ರೆಯ ಸ್ವಚ್ಛತೆ, ರೋಗಿಗಳ ನೋಂದಣಿಯಲ್ಲಿ ಆಗುತ್ತಿರುವ ಸಮಸ್ಯೆ, ಔಷಧಗಳ ಕೊರತೆ ಸೇರಿ ಎಲ್ಲ ರೀತಿಯ ಸಮಸ್ಯೆಗಳಿಗೆ ತಾರ್ಕಿಕವಾಗಿ ತಿಲಾಂಜಲಿ ಹಾಡಲಾಗುವುದು ಎಂಬ ಭರವಸೆ ನೀಡಿದರು.
ಜಿಲ್ಲಾಶಸ್ತ್ರಚಿಕಿತ್ಸಕಿ ಮಂಜುಳ, ವೈದ್ಯಕೀಯ ಕಾಲೇಜಿನ ಡೀನ್ ಮಂಜುನಾಥ್, ಆರ್‌ಎಂಒ ರಮೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ ಇದ್ದರು.