ಜಿಲ್ಲಾಸ್ಪತ್ರೆಗೆ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಭೇಟಿ

ಚಾಮರಾಜನಗರ, ಜೂ.01- ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಸರ್ಕಾರ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ್ ಇಂದು ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಹಲವರನ್ನು ವಿಚಾರಣೆಗೊಳಪಡಿಸಿದರು.
ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ, ಡಿಹೆಚ್‍ಓ ರವಿ, ಮೆಡಿಕಲ್ ಕಾಲೇಜಿನ ಡೀನ್ ಸಂಜೀವ್ ಕುಮಾರ್ ಹಾಗೂ ಜಿಲ್ಲಾಸ್ಪತ್ರೆಯ ವೈದ್ಯರನ್ನು ವಿಚಾರಣೆಗೊಳಪಡಿಸಿದ ಅವರು, ದುರಂತಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಪಡೆದರು. ಚಾಮರಾಜನಗರ ಜಿಲ್ಲಾಸ್ಪತ್ರೆ, ಆಕ್ಸಿಜನ್ ಪ್ಲಾಂಟ್ ಹಾಗೂ ಸಿಲಿಂಡರ್ಗಳ ವ್ಯವಸ್ಥೆ, ಸಿಸಿಟಿವಿ ಪರಿಶೀಲನೆ ಮಾಡಿದ ಅವರು, ಎಲ್ಲಾ ಮಾಹಿತಿಗಳನ್ನು ತಮ್ಮ ಡೈರಿಯಲ್ಲಿ ಬರೆದುಕೊಂಡರು. ನಿವೃತ್ತ ನ್ಯಾ. ಬಿ.ಎ. ಪಾಟೀಲ್ ಅವರೊಂದಿಗೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಸದಾಶಿವ ಸುಲ್ತಾನ್ ಪುರಿ ಇದ್ದರು.
ಸದ್ಯಕ್ಕೆ ಈಗ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಮತ್ತೊಂದು ತನಿಖೆ ನಡೆಯುತ್ತಿದ್ದು, ಸಾಕಷ್ಟು ಕುತೂಹಲ ಕೆರಳಿಸಿದ್ದು, ಮುಂದಿನ ವರದಿ ಬರುವವರೆಗೂ ಕಾಯಬೇಕಾಗಿದೆ.