ಜಿಲ್ಲಾವಾರು ಪ್ರಾತಿನಿಧ್ಯಕ್ಕಾಗಿ ಸಚಿವ ಸಂಪುಟ ಪುನರ್ರಚನೆಗೆ ಮಾಜಿ ಸಚಿವ ಗುತ್ತೇದಾರ್ ಆಗ್ರಹ

ಕಲಬುರಗಿ:ನ.13: ಜಿಲ್ಲಾವಾರು ಪ್ರಾತಿನಿಧ್ಯ ನೀಡಲು ರಾಜ್ಯ ಸಚಿವ ಸಂಪುಟ ಪುನರ್ರಚನೆ ಮಾಡಬೇಕು ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್ ಅವರು ಇಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿದವರಿಗೆ ಸಂಪುಟದಲ್ಲಿ ಮುಂದುವರೆಸಲಿ, ಇಷ್ಟು ದಿನ ಸಚಿವ ಸ್ಥಾನದಲ್ಲಿ ಮಜಾ ಮಾಡಿದವರನ್ನು ಮುಖ್ಯಮಂತ್ರಿಗಳು ಕೈಬಿಡಬೇಕು ಎಂದರು.
ಸಚಿವ ಸಂಪುಟದಲ್ಲಿ ಜಿಲ್ಲಾವಾರು ಪ್ರಾತಿನಿಧ್ಯ ನೀಡಬೇಕು. ರಾಜ್ಯದ ಉಪ ಮುಖ್ಯಮಂತ್ರಿ, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ್ ಅವರು ಜಿಲ್ಲೆಗೆ ಬಾರದೇ ಇರುವುದಕ್ಕೆ ಪುತ್ರನ ಅನಾರೋಗ್ಯದ ಕುರಿತು ಹೇಳುತ್ತಾರೆ. ಜಿಲ್ಲೆಗೆ ಬಾರದ ಉಸ್ತುವಾರಿ ಸಚಿವ ಕಾರಜೋಳ್ ಅವರನ್ನು ಬದಲಾಯಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಅನೇಕ ಜನ ಶಾಸಕರಿದ್ದಾರೆ. ಹೆಚ್ಚು ಬಾರಿ, ನಾಲ್ಕು ಬಾರಿ ಗೆದ್ದ ಆಳಂದ್‍ದ ಸುಭಾಷ್ ಗುತ್ತೇದಾರ್ ಅವರಿದ್ದಾರೆ. ಎರಡು ಬಾರಿ ಆಯ್ಕೆಯಾದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಇದ್ದಾರೆ. ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಮತ್ತು ಮಾಜಿ ಸಚಿವ ಸುನೀಲ್ ವಲ್ಲ್ಯಾಪೂರ್ ಮುಂತಾದವರು ಇದ್ದಾರೆ. ಅವರಲ್ಲಿ ಯಾರಿಗಾದರೂ ಮುಖ್ಯಮಂತ್ರಿಗಳು ಸಚಿವ ಸ್ಥಾನ ಕೊಡಬೇಕು ಎಂದು ಅವರು ಆಗ್ರಹಿಸಿದರು.
ನಾನು ಅಧಿಕಾರಕ್ಕಾಗಿ ಯಾರ ಬಳಿಯೂ ಭಿಕ್ಷೆ ಬೇಡಿಲ್ಲ, ಬೇಡುವುದೂ ಇಲ್ಲ. ಅದು ನನ್ನ ಜಾಯಮಾನವಾಗಿದೆ. ಇಲ್ಲಿಯವರೆಗೂ ನನಗೆ ರಾಜ್ಯ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಸಚಿವರನ್ನಾಗಿ ಮಾಡಿ ಎಂದು ಯಾರ ಬಳಿಯೂ ಹೋಗಿ ಮನವಿ ಮಾಡಿಲ್ಲ ಎಂದು ಗುತ್ತೇದಾರ್ ಅವರು ಸ್ಪಷ್ಟಪಡಿಸಿದರು.
ನನಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಹುದ್ದೆಯೂ ಸಹ ಮಹತ್ವದ್ದು ಎಂದು ಹೇಳಿದ ಅವರು, ಪಕ್ಷವು ಕೊಟ್ಟ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸುವುದಾಗಿ ತಿಳಿಸಿದರು.
ಮಹಾಮಾರಿ ಕೊರೋನಾ ಸೋಂಕಿನಿಂದ ಸಾವಿನ ದವಡೆಯಿಂದ ಪಾರಾದೆ. ಯಮನ ಹತ್ತಿರ ಹೋಗಿ ಬಂದ ಅನುಭವ ಆಗಿದೆ. ಆದ್ದರಿಂದ ಎಲ್ಲರೂ ಕೊರೋನಾ ಸೋಂಕು ಹರಡದಂತೆ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಕೋರಿದರು.
ಕಮಲಾಪೂರ್‍ದಲ್ಲಿ ಜರುಗಿದ ಬಿಜೆಪಿ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ್ ಕಟಿಲ್ ಅವರು ಆಗಮಿಸಿದಾಗ ನಾನು ಅಲ್ಲಿ ಭಾಗವಹಿಸಿದ್ದೆ. ಆಗಲೇ ನನಗೆ ಕೊರೋನಾ ಸೋಂಕು ತಗುಲಿತು. ವಿಪರೀತ ಜ್ವರ ಬಾಧೆಯಿಂದ ಮೂರು ದಿನ ಬಳಲಿದೆ. ನಗರದ ನಿವಾಸದಲ್ಲಿಯೇ ಐಸೋಲೇಷನ್ ಮೂಲಕ ಚಿಕಿತ್ಸೆ ಪಡೆದೆ. ಆದಾಗ್ಯೂ, ಕಡಿಮೆ ಆಗಲಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿರುವೆ. ಇನ್ನೂ ಪೂರ್ಣ ಚೇತರಿಸಿಕೊಂಡಿಲ್ಲ. ಆಕ್ಸಿಜನ್ ಕೊರತೆ ಆಗುತ್ತಿದೆ. ಇನ್ನೂ ವಿಶ್ರಾಂತಿ ಪಡೆಯುವೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದಾಜಿ ಪಾಟೀಲ್ ಅವರು ಉಪಸ್ಥಿತರಿದ್ದರು.