ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ನರಗುಂದ,ಸೆ.21:: ಅತೀವೃಷ್ಠಿ ಹಾಗೂ ಪ್ರವಾಹದಿಂದ ನರಗುಂದ ತಾಲೂಕಿನಲ್ಲಾದ ಹಾನಿಯ ಕುರಿತು ನಿಖರ ಸಮೀಕ್ಷೆ ಕೈಗೊಳ್ಳುವ ಮೂಲಕ ಅರ್ಹ ಸಂತ್ರಸ್ಥ ಕುಟುಂಬಕ್ಕೆ ಸರ್ಕಾರದ ಸಹಾಯ ಧನ ಸಮಯಕ್ಕೆ ಸರಿಯಾಗಿ ತಲುಪಿಸಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ತಾಲೂಕಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನರಗುಂದ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ಖುದ್ದು ಪರಿಶೀಲನೆ ನಂತರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಸಲಹೆ ಮಾರ್ಗದರ್ಶನ ನೀಡಿದರು. ಅತೀವೃಷ್ಠಿ ಹಾಗೂ ಪ್ರವಾಹದಿಂದಾದ ಹಾನಿ ಸಮೀಕ್ಷೆ ನಡೆಸುವಾಗ ಯಾರಿಗೂ ಅನ್ಯಾಯವಾಗದಂತೆ ಸರ್ಕಾರದ ಉದ್ದೇಶ ಗಮನದಲ್ಲಿಟ್ಟುಕೊಂಡು ನಿಖರ ಸಮೀಕ್ಷೆ ಕೈಗೊಳ್ಳಬೇಕು. ನಂತರ ಅರ್ಹ ಸಂತ್ರಸ್ಥರಿಗೆ ಸರ್ಕಾರದ ಸಹಾಯಧನವು ಶೀಘ್ರ ದೊರಕಿಸಿಕೊಡಲು ಅಧಿಕಾರಿ ವರ್ಗ ಮುಂದಾಗುವಂತೆ ತಿಳಿಸಿದರು.
ಜಂಟಿ ಸಮೀಕ್ಷೆಯನ್ನು ಕೈಗೊಳ್ಳುವಾಗ ವಿವಿಧ ಇಲಾಖೆಗಳ ಮಧ್ಯೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಶೀಘ್ರ ಪರಿಹಾರ ತಲುಪಿಸುವ ಕಾರ್ಯ ಇಲಾಖೆಗಳಿಂದ ಆಗಬೇಕು. ಯಾವುದೇ ದೂರಿಗೆ ಆಸ್ಪದವಿಲ್ಲದಂತೆ ಪರಿಹಾರ ಕಾರ್ಯ ನಡೆಸಬೇಕೆ ಎಂದರು.
ಪ್ರವಾಹ ಪರಿಸ್ಥಿತಿ ಸಮರ್ಪಕ ನಿರ್ವಹಣೆಗೆ ಸರ್ವ ಸನ್ನದ್ಧರಾಗಿರಲು ಸೂಚಿಸಿದ ಅವರು ಪ್ರವಾಹೊತ್ತರ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಬೇಕೆಂದು ಹೇಳಿದರು. ನಗರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸ್ವಚ್ಛ, ಶುದ್ಧ ಪರಿಸರಕ್ಕೆ ಆದ್ಯತೇ ನೀಡಬೇಕು. ಕೊಳಚೆ ಪ್ರದೇಶಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಸಾಂಕ್ರಾಮಿಕ ರೋಗಗಳಿಂದ ಜಾಗೃತರಾಗಿರುವಂತೆ ಅರಿವು ಮೂಡಿಸಬೇಕು. ಮಳೆ ನೀರು ಸರಾಗವಾಗಿ ಮುಂದೆ ಸಾಗಲು ಚರಂಡಿಗಳ ಸ್ವಚ್ಚತೆಗೆ ಗಮನ ಹರಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಎ.ಡಿ.ಅಮರವಾದಗಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ತಹಶೀಲ್ದಾರ ಕಚೇರಿಯ ಶಿರೇಸ್ತೆದಾರರು, ಕಂದಾಯ ನೀರಿಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಕಚೇರಿ ಸಿಬ್ಬಂದಿಗಳು ಹಾಜರಿದ್ದರು.