ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತೆ ನಡುವೆ ಜಟಾಪಟಿ: ಐಎಎಸ್ ಹುದ್ದೆಗೆ ಶಿಲ್ಪಾ ನಾಗ್ ರಾಜಿನಾಮೆ

ಮೈಸೂರು,ಜೂ.3- ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವೆ ಕೆಲ ದಿನಗಳಿಂದ ನಡೆಯುತ್ತಿದ್ದ ಶೀತಲ ಸಮರ ಇಂದು ಸ್ಪೋಟಗೊಂಡಿದ್ದು ,ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ಐಎಎಸ್ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.

ಮೈಸೂರು ಜಿಲ್ಲೆಯ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಜಡೆ ಜಗಳ ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಎಡೆ ಮಾಡಿದೆ.

ಈ ಇಬ್ಬರು ಐಎಎಸ್ ಅಧಿಕಾರಿಗಳ ನಡುವಿನ ಕಿತ್ತಾಟದಿಂದ ಉಂಟಾಗಿರುವ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲು ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಅವರು ನಾಳೆ ಮೈಸೂರಿಗೆ ತೆರಳುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ‌.

ಮೈಸೂರು ಜಿಲ್ಲೆಯ ಶಾಸಕರು, ಸಂಸದರು ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ ವಿರುದ್ದ ತಿರುಗಿ ಬಿದ್ದಿರುವ ನಡುವೆಯೇ ಇದೀಗ‌ ಮಹಿಳಾ ಐಎಎಸ್ ಅಧಿಕಾರಿ ಶಿಲ್ಪಾ‌ನಾಗ್ ತಿರುಗಿ ಬಿದ್ದು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮೈಸೂರು ‌ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ ಕೆಲಸದಲ್ಲಿ ಸಹಕಾರ ನೀಡುತ್ತಿಲ್ಲ ಜೊತೆಗೆ ಹಸ್ತ ಕ್ಷೇಪ ಮಾಡುತ್ತಿದ್ದಾರೆ. ಎಷ್ಟು ದಿನ ಸಹಿಸಿಕೊಳ್ಳೋದು ಇದನ್ನು ಪ್ರತಿಭಟನೆ ಮಾಡಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಪ್ರಕಟಿಸಿದರು.

ಜಿಲ್ಲಾಡಳಿತದಿಂದ‌ ನಮಗೆ ಯಾವುದೇ ಸಹಕಾರ ಸಿಗುತ್ತಿಲ್ಲ. ಸಿಎಸ್‌ಆರ್ ಫಂಡ್‌ನಿಂದ ಕೆಲಸ ಮಾಡುತ್ತಿದ್ದೇವೆ . ಐಎಎಸ್ ಅಧಿಕಾರಿಯ ಮೇಲೆ ಮತ್ತೊಬ್ಬ ಐಎಎಸ್ ಅಧಿಕಾರಿ ದಬ್ಬಾಳಿಕೆ ಮಾಡೋದು ಎಷ್ಟು ಸರಿ , ವ್ಯವಸ್ಥಿತವಾಗಿ ಕಡೆಗಣಿಸುವ ಪಿತೂರಿ ನಡೆದಿದೆ ಎಂದು ದೂರಿದರು.

ನಗರದಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ, ಕೊರೊನಾ ಸೋಂಕು ಪರೀಕ್ಷೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಮಾತುಗಳು ಬರುತ್ತಿವೆ.
3000 ಮೆಡಿಸನ್ ಕಿಟ್ ನ್ನು ಒಂದು ಸಂಸ್ಥೆ ನೀಡಿತ್ತು ಅದನ್ನು ನೀಡಲು ತಡೆಹಿಡಿಯಲಾಯಿತು.
ಪಾಲಿಕೆ ಕಚೇರಿಯ ಬೀಗ ತೆಗೆದು ಪೊಲೀಸರನ್ನ ಕಳುಹಿಸಿ ಜಿಲ್ಲಾಡಳಿತ ಔಷಧಿ ತೆಗೆದುಕೊಳ್ಳಲಾಯಿತು ಎಂದರು.

ಜಿಲ್ಲಾಡಳಿತದ ಕೆಲವು ನಿರ್ಧಾರ ಸಹಿಸಿಕೊಂಡು ಸಾಕಾಗಿದೆ. ನಮಗೆ ಯಾವುದೇ ಅನುಧಾನ ನೀಡಿಲ್ಲ, ಸಿ.ಎಸ್.ಆರ್ ನಿಧಿಯಿಂದ ಎಲ್ಲ ಕೆಲಸ ಮಾಡುತ್ತಿದ್ದೇವೆ. ಸಿ.ಎಸ್.ಆರ್ ನ ವಾಟ್ಸಾಪ್ ಗ್ರೂಪ್ ನಿಂದ ನನ್ನನ್ನು ತೆಗೆಯುವ ಕೆಲಸ ಮಾಡಿದ್ದಾರೆ ಎಂದು‌‌ ದೂರಿದರು.

ಮೈಸೂರು‌ ನಗರದಲ್ಲಿ ಜನರು, ಅಧಿಕಾರಿಗಳು ನಮಗೆ ಸಹಕಾರ ನೀಡುತ್ತಿದ್ದಾರೆ ಆದರೂ, ಜಿಲ್ಲಾಡಳಿತ ಸರಿಯಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ. ಮಾದ್ಯಮಗಳಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದರು.

ನಗರ ಪ್ರದೇಶಕ್ಕೆ ಒಂದು ಮಾನದಂಡ, ಗ್ರಾಮೀಣ ಪ್ರದೇಶಕ್ಕೆ ಒಂದು ಮಾನದಂಡ ಮಾಡಲಾಗಿದೆ. ಸೂಕ್ತವಾಗಿ ಕೊರೊನಾ ನಿರ್ವಹಣೆ ಮಾಡಿದರೂ, ಪಾಲಿಕೆ ಕೆಲಸ ಮಾಡುತ್ತಿಲ್ಲ ಎಂದು ಬಿಂಬಿಸಲಾಗುತ್ತಿದೆ ಎಂದು ದೂರಿದರು.

ಮೈಸೂರು ಜನತೆಗೆ ಮುಂದಾದರೂ ಒಳ್ಳೆಯದಾಗಲಿ. ಮುಂದೆ 3ನೇ ಅಲೆ ಇದೆ, ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಅಧಿಕಾರಿಗಳಿಗೆ ಅವಮಾನವಾದರೆ ಅದನ್ನು ಸಹಿಸೋದಿಲ್ಲ. ಕೆಲವರನ್ನು ಹೋಗು, ಬಾ ಅಂತ ಮಾತನಾಡಿಸೋದು, ನಾನೇ ಜಿಲ್ಲಾಧಿಕಾರಿ, ನಾನೇ ಸುಪ್ರೀಂ ಅಂತ ಹೇಳೋದು ನಾಯಕತ್ವದ ಗುಣ ಅಲ್ಲ ಎಂದು ಕಿಡಿಕಾರಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ತನೆ ಹಾಗು ವಿವಿಧ ವಿಚಾರಗಳಿಂದಾಗಿ ಬೇಸತ್ತು ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದೇನೆ. ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಯಾವುದೇ ಅಧಿಕಾರಿಗೂ ಈ ರೀತಿಯ ಜಿಲ್ಲಾಧಿಕಾರಿ ಸಿಗದಿರಲಿ ಎಂದು ಪತ್ರದಲ್ಲಿ ತಿಳಿಸಿದ್ದೇನೆ ಎಂದರು.