ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಂದಗಾಂಧಿಭವನ-ಪತ್ರಿಕಾಭವನ-ಉಗ್ರಾಣಕ್ಕೆ ಭೇಟಿ ಪರಿಶೀಲನೆ

s(ಸಂಜೆವಾಣಿ ವಾರ್ತೆ)
ವಿಜಯಪುರ: ಜು.30: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಶನಿವಾರ ನಗರದ ಕನಕದಾಸ ಬಡಾವಣೆಯಲ್ಲಿರುವ ಗಾಂಧಿಭವನ, ಪತ್ರಿಕಾಭವನ, ಚುನಾವಣಾ ಸಂಬಂಧಿತ ಸಾಮಗ್ರಿಗಳನ್ನಿಡುವ ಉಗ್ರಾಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳಿಗ್ಗೆ ನಗರದ ಕನಕದಾಸ ಬಡಾವಣೆಯಲ್ಲಿರುವ ಗಾಂಧಿ ಭವನಕ್ಕೆ ಭೇಟಿ ನೀಡಿದ ಅವರು, ನಗರದಲ್ಲಿ ಅತ್ಯಧ್ಬುತವಾದ ಗಾಂಧಿ ಭವನ ಸರ್ಕಾರ ನಿರ್ಮಾಣ ಮಾಡಿ ಸೆಪ್ಟಂಬರ್ 30ರಂದು ಉದ್ಘಾಟನೆಗೊಂಡು ಇದೀಗ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಮಹಾತ್ಮಗಾಂಧಿ ಜೀವನಗಾಥೆ, ಅವರ ಕುರಿತಾಗಿ ಎಲ್ಲ ಮಾಹಿತಿಯನ್ನು ಅಳವಡಿಸಿದ ಸುಸ್ಸಜ್ಜಿತ ಹಾಗೂ ಮಾಹಿತಿಯ ಆಗರವಾದ ಗಾಂಧಿ ಭವನ ನಿರ್ವಹಣೆ ಕುರಿತು ಗಾಂಧಿ ಭವನ ನಿರ್ವಹಣಾ ಅಧಿಕಾರೇತರ ಸಮಿತಿಯ ಸದಸ್ಯರೊಂದಿಗೆ ಚರ್ಚಿಸಿದರು.
ಗಾಂಧಿಭವನದ ನಿರ್ವಹಣೆ ಮಾಡುವ ಕುರಿತು ಸಮಗ್ರವಾಗಿ ಚರ್ಚಿಸಿ, ಮಕ್ಕಳಿಗೆ ಗಾಂಧೀಜಿಯವರ ಜೀವನದ ಕುರಿತು ಅರಿವು ಮೂಡಿಸಲು ಶಾಲಾ ಮಕ್ಕಳಿಗೆ ಗಾಂಧಿಭವನ ವೀಕ್ಷಣೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು. ಗಾಂಧಿ ಭವನದಲ್ಲಿ ಗಾಂಧಿ ಸಂಬಂಧಿಸಿದ ಪುಸ್ತಕ, ಕಲಾಕೃತಿಗಳು ಸೇರಿದಂತೆ ವಿವಿಧ ವಸ್ತುಗಳನ್ನು ಪ್ರದರ್ಶನ ಹಾಗೂ ಮಾರಾಟ ಮಳಿಗೆ ಸ್ಥಾಪಿಸಿ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಸದಸ್ಯರು ನೀಡಿದ ಸಲಹೆಗಳನ್ನು ಸ್ವೀಕರಿಸಿ, ಮುಂದಿನ ವಾರದಲ್ಲಿ ಸಾಮಾನ್ಯ ಸಭೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಮಾನವರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಗಾಂಧಿ ಭವನ ಅಧಿಕಾರೇತರಸಮಿತಿ ಸದಸ್ಯರಾದ ಸುರೇಶ ಘೊಣಸಗಿ, ಪೀಟರ್ ಅಲೆಕ್ಸಾಂಡರ್, ಬಿ.ಬಿ.ಪಾಟೀಲ ಶೇಗುಣಸಿ, ಫಿರೋಜ ರೋಜಿಂದಾರ, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಗೋಪಿನಾಥ ಮಲಜಿ ಉಪಸ್ಥಿತರಿದ್ದರು.
ಪತ್ರಿಕಾ ಭವನ ಭೇಟಿ ವೀಕ್ಷಣೆ : ನಂತರದ ನಗರದ ಕನಕದಾಸ ಬಡಾವಣೆಯಲ್ಲಿರುವ ಜಿಲ್ಲಾ ಪತ್ರಿಕಾ ಭವನಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು, ಭವನದಲ್ಲಿರುವ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ಪತ್ರಕರ್ತರು ಉಪಸ್ಥಿತರಿದ್ದರು.
ವೇರ್‍ಹೌಸ್‍ಗೆ ಭೇಟಿ : ಚುನಾವಣೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಸಂಗ್ರಹಿಸಿಡುವ ಕನಕದಾಸ ಬಡಾವಣೆಯಲ್ಲಿರುವ ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಕೆಲಮಹಡಿ ಹಾಗೂ ನೆಲಮಹಡಿ ಕೊಠಡಿಗಳನ್ನು ವೀಕ್ಷಣೆ ಮಾಡಿ, ಉಗ್ರಾಣದಲ್ಲಿ ಚುನಾವಣೆಗೆ ಸಂಬಂಧಿಸಿದ ಇವಿಎಂ, ವಿವಿಪ್ಯಾಟ್ ಸೇರಿದಂತೆ ಚುನಾವಣಾ ಸಾಮಗ್ರಿಗಳನ್ನು ಇರಿಸಲಾಗುವುದರಿಂದ ಭದ್ರತಾ ದೃಷ್ಟಿಯಿಂದ ಕೊಠಡಿಗಳನ್ನು ಸಜ್ಜಾಗಿಟ್ಟುಕೊಳ್ಳಬೇಕು. ಸಣ್ಣ ಪುಟ್ಟ ದುರಸ್ತಿಗಳಿದ್ದಲ್ಲಿ ದುರಸ್ತಿ ಕಾರ್ಯ ಕೈಗೊಂಡು ಸುಸ್ಸಜ್ಜಿತವಾಗಿ ಇಟ್ಟುಕೊಳ್ಳುವಂತೆ ಸೂಚಿಸಿದ ಅವರು, ಉಗ್ರಾಣ ಅಬಿವೃದ್ದಿಪಡಿಸುವ ಸಂಬಂಧಿಸಿದಂತೆ ಅಗತ್ಯ ಸಲಹೆ-ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.
ನಂತರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಎದುರಿಗೆ ಇರುವ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.