ಜಿಲ್ಲಾಧಿಕಾರಿ ಜೊತೆ ಕಾಂಗ್ರೆಸ್ ಕೋವಿಡ್ ಹೆಲ್ಪ್‌ಲೈನ್ ಸಂಚಾಲಕ ಐವನ್ ಚರ್ಚೆ

ಮಂಗಳೂರು, ಮೇ ೩- ಜಿಲ್ಲೆಯಲ್ಲಿ ಕೋವಿಡ್ ೧೯ರ ಎರಡನೇ ಅಲೆಯು ಶರವೇಗದಲ್ಲಿ ಹೆಚ್ಚುತ್ತಿದ್ದು, ಮರಣ ಹೊಂದುವವರ ಸಂಖ್ಯೆಯು ಹೆಚ್ಚಾಗುತ್ತಿದ್ದರೂ, ಕಳೆದ ೧೩ ತಿಂಗಳುಗಳಿಂದ ಈ ಬಗ್ಗೆ ಯಾವುದೇ ಮುಂಜಾಗ್ರತೆ ಕ್ರಮ ವಹಿಸದೇ ಇರುವುದರಿಂದ ಪ್ರಸ್ತುತ ಉಂಟಾಗುವ ಪರಿಣಾಮಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಕನಿಷ್ಠ ೫೦೦ ಆಕ್ಸಿಜನ್ ಸರಬರಾಜಿನಿಂದ ಕೂಡಿದ ಬೆಡ್‌ಗಳುಳ್ಳ ತಾತ್ಕಲಿಕ ಆಸ್ಪತ್ರೆಯನ್ನು ಕೂಡಲೇ ತೆರೆಯುವಂತೆ ಮುಖ್ಯ ಮಂತ್ರಿಗಳಿಗೆ ಜಿಲ್ಲಾಧಿಕಾರಿಯವರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಡಾ.ಜಗದೀಶ್ ಇವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೇಟಿ ಮಾಡಿ, ಲಸಿಕೆ ಹಾಕಿಕೊಳ್ಳಲು ಜನರು ಮುಗಿಬಿದ್ದಿದ್ದು, ಕೇವಲ ವೆನ್ ಲಾಕ್ ಆಸ್ಪತ್ರೆಯೊಂದರಲ್ಲಿ ಮಾತ್ರ ಲಸಿಕೆ ನೀಡುವ ಸುದ್ದಿ ಕೇಳಿದ ಜನರು ಆಸ್ಪತ್ರೆಯತ್ತ ಆಗಮಿಸುವಾಗ, ಅಲ್ಲಿ ಉಂಟಾಗುವ ಗೊಂದಲವನ್ನು ಸರಿಪಡಿಸಿಕೊಳ್ಳಲು ಪ್ರಾಥಮಿಕ ಆರೋಗ್ಯ ಕೇಂದ್ರಮತ್ತು ಶಿಬಿರ ಮೂಲಕ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಯವರನ್ನು ಮನವಿ ಮಾಡಲಾಯಿತು. ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಮತ್ತು ಅದಕ್ಕೆ ತಗಲುವ ವೆಚ್ಚವನ್ನು ಸರಕಾರವೇ ಭರಿಸಬೇಕೆಂದು ದ.ಕ ಜಿಲ್ಲಾ ಕಾಂಗ್ರೆಸ್ ಕೋವಿಡ್ ಹೆಲ್ಪ್ ಲೈನ್ ಸಂಚಾಲಕ ಶ್ರೀ ಐವ್ಬನ್ ಡಿ ಸೋಜರವರು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ತಗಲುವ ವೆಚ್ಚವು ದುಬಾರಿಯಾಗಿದ್ದು, ಈ ಬಗ್ಗೆ ಇಲಾಖೆ ಸರಕಾರದೊಂದಿಗೆ ಚರ್ಚಿಸಿ, ಯಾವುದೇ ಕೋವಿಡ್ ರೋಗಿಯು ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲು ಕ್ರಮ ಕೈಗೊಳ್ಳಬೇಕೆಂದು ಅಲ್ಲದೇ, ಕೋವಿಡ್ ರೋಗಿಗಳಿಗೆ ಬೇಕಾಗುವ ಆಕ್ಸಿಜನ್ ಬೆಡ್ ಗಳ ಕೊರತೆಯನ್ನು ಜಿಲ್ಲೆಯಲ್ಲಿರುವ ಎಲ್ಲ ೨೭೯ ಆಕ್ಸಿಜನ್ ಬೆಡ್ ಗಳು ಭರ್ತಿಯಾಗಿದ್ದು, ಪ್ರಸ್ತುತ ಯಾವುದೇ ಆಕ್ಸಿಜನ್ ಬೆಡ್ ಗಳು ಲಭ್ಯವಿಲ್ಲದ ಕಾರಣಕ್ಕಾಗಿ ಕೋವಿಡ್ ರೋಗಿಗಳ ಪ್ರಾಣಕ್ಕೆ ಅಪಾಯವಿರುವುದರಿಂದ ಮಂಗಳೂರಿನ ಯಾವುದಾದರೂ ಸಭಾಭವನದಲ್ಲಿ ಆಕ್ಸಿಜನ್ ಸರಬರಾಜು ಹೊಂದಿದ ಕನಿಷ್ಠ ೫೦೦ ಬೆಡ್ ಗಳನ್ನು ಸಾಗಿಸಿ, ಕೋವಿಡ್ ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕೆಂದುಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಬಗೆ ಈ ಮೇಲಿನ ಬೇಡಿಕೆಗಳನ್ನು ಸರಕಾರದ ಗಮನಕೆ ತಂದು ಕೂಡಲೇ ಈಡೇರಿಸುವ ಭರವಸೆಯನ್ನು ಜಿಲ್ಲಾಧಿಕಾರಿಯವರು ನಿಯೋಗಕ್ಕೆ ನೀಡಿದರು.
ನಿಯೋಗದಲ್ಲಿ ಮಾಜಿ ಮೇಯರ್ ಮತ್ತು ಕಾರ್ಪೋರೇಟರ್ ಶ್ರೀ ಶಶಿಧರ್ ಹೆಗ್ಡೆ, ಶ್ರೀ ಸುಬೋದಯ್ ಆಳ್ವ, ಶ್ರೀ ವಿವೇರ್ ರಾಜ್ ಪೂಜಾರಿ, ಶ್ರೀ ಮೊಹಮ್ಮದ್ ಕುಂಜತ್ತ್ ಬೈಲ್, ಶ್ರೀ ಪ್ರಕಾಶ್ ಸಾಲಿಯಾನ್, ಶ್ರೀ ಅಶಿತ್ ಪಿರೇರಾ,ಶ್ರೀ ಸತೀಶ್ ಪೆಂಗಳ್, ಶ್ರೀ ಪ್ರವೀಣ್ ಜೇಮ್ಸ್, ಶ್ರೀ ಮಹೇಶ್ ಕುಮಾರ್, ಶ್ರೀ ಅಬಿಬುಲ್ಲ, ಶ್ರೀ ಯೂಸೂಫ್ ಉಚ್ಛಿಲ್, ಶ್ರೀ ಡಿ.ಕೆ.ಸುಧೀರ್, ಶ್ರೀ ಕ್ಲೈಜ್, ಶ್ರೀ ಮಿಲಾಜ್ ಅತ್ತಾವರ, ಶ್ರೀ ಸಲೀಂ ಮುಂತಾದವರು ಉಪಸ್ಥಿತರಿದ್ದರು.