ಜಿಲ್ಲಾಧಿಕಾರಿ ಕಚೇರಿ ಎದುರು ಕುರಿಗಾರರ ಬೃಹತ್ ಪ್ರತಿಭಟನೆ

ಕೊಪ್ಪಳ ನ 07 : ಆಕಸ್ಮಿಕವಾಗಿ ಮರಣ ಹೊಂದಿದ ಕುರಿ, ಮೇಕೆ ಮತ್ತು ಮರಿಗಳಿಗೆ ರಾಜ್ಯ ಸರಕಾರ ನೀಡುತ್ತಿದ್ದ ಪರಿಹಾರವನ್ನು ಶೀಘ್ರದಲ್ಲಿ ನೀಡುವಂತೆ ಆಗ್ರಹಿಸಿ ಕುರಿಗಾರರು ಬೃಹತ್ ಪ್ರತಿಭಟನೆ ನಡೆಸಿದರು. ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕುರಿಗಾರರ ಬೃಹತ್ ಪ್ರತಿಭಟನೆ ಮಾಡುವುದಾಗಿ ಸರ್ಕಾರವನ್ನು ಎಚ್ಚರಿಸಿದರು. ಸಹಕಾರ ಕುರಿ ಮತ್ತು ಮೇಕೆ ಸಾಗಾಣಿಕೆ ಸಂಘಗಳ ಮಂಡಳಿ ಅಧ್ಯಕ್ಷರಾದ ಪಂಡಿತರು, ಜಿಲ್ಲೆಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದವರು ಜಿಲ್ಲಾಧಿಕಾರಿ ಕಚೇರಿ ಎದುರು ಜರುಗಿದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೂಡಲೇ ವೃತಪಟ್ಟಿರುವ ಕುರಿಗಳಿಗೆ ಸರಕಾರದ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಎಸ್ಟಿ ಮೀಸಲಾತಿ ಹೋರಾಟದ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀಶ ಲಕ್ಷ್ಮೇಶ್ವರದ, ಶ್ರೀಮತಿ ಭಾಗ್ಯಶ್ರೀ, ಬಾಬಣ್ಣ ಅವರು ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಕುರಿ ಸತ್ತರೆ 5025 ಸಾವಿರಾರು ಪರಿಹಾರ ನೀಡಲಾಗುತ್ತಿತ್ತು. ಅದು ಮುಂದುವರಿಸಬೇಕೆಂದರು. ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಗುಡದಪ್ಪನವರ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ನೂರಾರು ಸಂಖ್ಯೆಯಲ್ಲಿ ಕುರಿಗಾರರು ಭಾಗವಹಿಸಿದ್ದರು.