ಜಿಲ್ಲಾಧಿಕಾರಿ ಆದೇಶ ಹೈಕೋರ್ಟ್ ತೆರವು

ಕೋಲಾರ,ಜೂ,೧೦-ಹಿಂದಿನ ಜಿಲ್ಲಾಧಿಕಾರಿ ಸತ್ಯಭಾಮ ಅವರು ಕಾರ್ಮಿಕರ ಪ್ರತಿಭಟನೆಗೆ ನಿರ್ಬಂಧ ವಿಧಿಸಿದ್ದರು. ಹೀಗಾಗಿ, ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಜಿಲ್ಲಾಧಿಕಾರಿಯ ಕಾನೂನು ಬಾಹಿರ ಆದೇಶವನ್ನು ಹೈಕೋರ್ಟ್ ಈಗ ಆದೇಶ ತೆರವುಗೊಳಿಸಿದೆ ಎಂದು ಇಂಡಸ್ಟ್ರಿಯಲ್ ಅಂಡ್ ಜನರಲ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಬಿ.ವಿ.ಸಂಪಂಗಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ೨೦೨೦ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸತ್ಯಭಾಮ ಧರಣಿ ನಡೆಸಬೇಕೆಂದರೆ ಜಿಲ್ಲಾಡಳಿತದ ಪೂರ್ವಾನುಮತಿ ಇಲ್ಲದೆ ಪ್ರತಿಭಟನೆ ನಡೆಸಬಾರದೆಂದು ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದರು. ಅದಕ್ಕೆ ಕಾರಣ ವಿಸ್ಟ್ರಾನ್ ಘಟನೆ ಕಾರಣ. ಅದು ಆಚಾನಕ್ ಆಗಿ ನಡೆದ ಘಟನೆ. ಇದನ್ನೇ ನೆಪ ಮಾಡಿಕೊಂಡು ಕಾರ್ಮಿಕರ ಹಕ್ಕು ಹತ್ತಿಕ್ಕಿದರು ಎಂದು ಆರೋಪಿಸಿದರು.
ಸಾರ್ವಜನಿಕ ವಲಯದಲ್ಲಿ ಶಾಂತಿಗೆ ಭಂಗ ಆಗುವ ಸ್ಥಳಕ್ಕೆ ಈ ರೀತಿ ಆದೇಶ ಹೊರಡಿಸಬೇಕು. ಆದರೆ, ಇಡೀ ಪ್ರದೇಶದಲ್ಲಿ ಪ್ರತಿಭಟನೆ ನಡೆಸಬಾರದೆಂದು ಹೇಳಿದರೆ ಹೇಗೆ? ನಾವು ಕೂಡ ಅಂದು ಪ್ರತಿಭಟನೆಗೆ ಅವಕಾಶ ಕೋರಿ ಪೊಲೀಸ್ ಠಾಣೆ ಅನುಮತಿ ಕೋರಿದ್ದೇವು ಎಂದು ಹೇಳಿದರು.
ಜಿಲ್ಲಾಧಿಕಾರಿಯು ಬಂಡವಾಳ ಶಾಹಿಗಳ ಹಿತ ಕಾಯಲು ಆದೇಶ ಹೊರಡಿಸಿದ್ದರು.ಪ್ರಜಾ ಪ್ರಭುತ್ವದ ವ್ಯವಸ್ಥೆಯಲ್ಲಿ ಕಾರ್ಮಿಕರ ಹಕ್ಕು ಧಮನ ಮಾಡಲು ಹೊರಟಿದ್ದರು. ಆದರೆ, ನ್ಯಾಯಾಲಯ ನಮ್ಮ ಪರ ತೀರ್ಪು ನೀಡಿದೆ. ಬೇಡಿಕೆ ಈಡೇರಿಸಿಕೊಳ್ಳಲು ಕಾನೂನು ರೀತಿಯಲ್ಲಿ ಮುಷ್ಕರ ನಡೆಸಲು ಅವಕಾಶ ಸಿಕ್ಕಿದೆ. ಹಿಂದಿನ ಜಿಲ್ಲಾಧಿಕಾರಿಗಳ ಅವೈಜ್ಞಾನಿಕ ನಿರ್ಧಾರವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಇದಲ್ಲದೆ ಜಿಲ್ಲೆಯ ಕಾರ್ಮಿಕರು ಹಾಗೂ ಉದ್ಯೋಗಾಕಾಂಕ್ಷಿಗಳ ಹಿತರಕ್ಷಣೆ ಸಂಬಂಧ ಕೆಲವೊಂದು ಬೇಡಿಕೆಗಳಿದ್ದು, ಅದನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಮಿತಿ ಸದಸ್ಯೆ ಮಮತ, ರಾಜ್ಯ ಪ್ರದಾನ ಕಾರ್ಯದರ್ಶಿ ಜೆ.ಹನುಮಂತ ರಾವ್, ರಾಜ್ಯ ಉಪಾಧ್ಯಕ್ಷ ಹರೀಶ್, ಮುಖಂಡರಾದ ಎಂ.ರಘುನಾಥ್, ಮಲ್ಲಿಕಾರ್ಜುನ್, ಎಸ್.ವಿಜಯಕುಮಾರ್, ನಾರಾಯಣ ಸ್ವಾಮಿ, ಡಿ.ಮಂಜುನಾಥ್, ಶ್ರೀಧರ್ ರಾವ್, ಶಿವರಾಜ್ ಕುಮಾರ್.ಎನ್, ಆಂಜಿ, ವೀರೇಂದ್ರ, ಶ್ರವಂತ್ ಇದ್ದರು.