
ಬೀದರ್:ಎ.4: ಎ. 03 ರಂದು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ನನ್ನ ಬೇಡಜಂಗಮ ಜಾತಿ ಪ್ರಮಾಣ ಪತ್ರದ ಪ್ರಕರಣ ನಡೆದು, ಜಾತಿ ಪ್ರಮಾಣ ಪತ್ರ ರದ್ದುಪಡಿಸಿರುವ ಜಿಲ್ಲಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು. ಸೋಲಿನ ಭೀತಿಯಿಂದ ಪ್ರಭು ಚವ್ಹಾಣ ಅವರು ಜಿಲ್ಲಾಡಳಿತವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ವಾರ್ತಾ ಇಲಾಖೆಯಿಂದ ಬೇಡ ಜಂಗಮ ಪ್ರಮಾಣ ಪತ್ರ ರದ್ದುಗೊಳಿಸಲಾಗಿದೆ ಎಂದು ಸುದ್ದಿಮಾಡಿದ್ದು ದೊಡ್ಡ ದುರಂತ ಎಂದು ಔರಾದ ಮೀಸಲು ಕ್ಷೇತ್ರದ ಟಿಕೇಟ್ ಆಕಾಂಕ್ಷಿ ರವೀಂದ್ರ ಸ್ವಾಮಿ ತಿಳಿಸಿದರು.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 4ಎಫ್ ಅಡಿಯಲ್ಲಿ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಅವಕಾಶ ಇರುವುದಿಲ್ಲ. ನನ್ನ ಜೊತೆ ಸಹಾಯಕ ಆಯುಕ್ತರು, ತಹಸಿಲ್ದಾರರು, ಕಂದಾಯ ನಿರೀಕ್ಷಕರು ಬೀದರ (ಉತ್ತರ) ಹಾಗೂ ಗ್ರಾಮ ಲೆಕ್ಕಾಧಿಕಾರಿ ಬೀದರ (ಉತ್ತರ) ಇವರು ಕೂಡಾ ಪ್ರಕರಣದ ಪ್ರತಿವಾದಿಗಳಾಗಿದ್ದು, ಇವರಿಗೆ ನೋಟಿಸ್ ಕೊಡಬೇಕಾಗಿತ್ತು. ಆದರೆ ನೋಟಿಸ್ ಕೊಡದೆ ತರಾತುರಿಯಲ್ಲಿ ಜಿಲ್ಲಾಧಿಕಾರಿಗಳು ನಿರ್ಧಾರ ಕೈಗೊಂಡಿರುವುದು ತಪ್ಪು ಎಂದರು.
ಮಾರ್ಚ್ 21, 2023 ರಿಂದ ಎಪ್ರಿಲ್ 01, 2023 ಅಂದರೆ ಕೇವಲ 10 ದಿನದಲ್ಲಿ ಚುನಾವಣೆ ನೆಪವೊಡ್ಡಿ ನನ್ನ ಜಾತಿ ಪ್ರಮಾಣ ಪತ್ರದ ಪ್ರಕರಣ ಇತ್ಯರ್ಥಗೊಳಿಸಿರುತ್ತಾರೆ. ಆದರೆ ಹಾಲಳ್ಳಿ ಗ್ರಾಮದ ನಾಮದೇವ ಮತ್ತು ಧನರಾಜ ಎಂಬುವವರು 28-07-2021 ರಂದು ಪ್ರತೀಕ ತಂದೆ ಪ್ರಭು ಚವ್ಹಾಣ ಅವರ ನಕಲಿ ಜಾತಿ ಪ್ರಮಾಣ ಪತ್ರದ ವಿರುದ್ಧ 4ಎಫ್ ಅಡಿಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ದೂರು ದಾಖಲಿಸಿ ಎರಡು ವರ್ಷಗಳಾದರೂ ಜಾತಿ ಪ್ರಮಾಣ ಪತ್ರದ ಪ್ರಕರಣದ ತನಿಖೆ ಕೈಗೊಳ್ಳದೇ ಇರುವುದು ಡಿಸಿಯವರು ಸಚಿವರ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಎಂದರು.
ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ವಿಚಾರಣೆ ಮಾಡದ ಹಿನ್ನೆಲೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಆಯೋಗ ಇವರು ಈ ಹಿಂದಿನ ಜಿಲ್ಲಾಧಿಕಾರಿಗಳಿಗೆ ಪ್ರಕರಣದ ವಿಚಾರಣೆ ಕೈಗೊಂಡು ಅದರ ಮಾಹಿತಿ ಕೊಡಬೇಕಾಗಿ ನಿರ್ದೇಶನ ನೀಡಿರುತ್ತಾರೆ. ಅದರಂತೆ ಈ ಹಿಂದಿನ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅವರು ಈ ಪ್ರಕರಣ ಕುರಿತು ವಿಚಾರಣೆ ಕೈಗೊಂಡಿರುತ್ತಾರೆ. ಆದರೆ ಅವರು ವರ್ಗಾವಣೆಯಾದ ನಂತರ ಈಗಿನ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಪ್ರಕರಣವನ್ನು ಶ್ರೀ ಪ್ರಭು ಚವ್ಹಾಣ ಅವರ ಒತ್ತಾಯದ ಮೇರೆಗೆ ವಿಚಾರಣೆ ಕೈಗೊಳ್ಳುತ್ತಿಲ್ಲ. ಈ ಪ್ರಕರಣದಲ್ಲಿರುವ ನ್ಯಾಯವಾದಿ ಸಂಜಯ್ ಮಠಪತಿ ಅವರು ಸುಮಾರು ಸಲ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಪ್ರಕರಣದ ವಿಚಾರಣೆ ನಡೆಸಬೇಕೆಂದು ವಿನಂತಿಸಿಕೊಂಡಿದ್ದರೂ ಕೂಡಾ ಪ್ರಭು ಚವ್ಹಾಣ ಅವರ ಒತ್ತಡಕ್ಕೆ ಒಳಗಾಗಿ ಮತ್ತು ಅವರಿಗೆ ಸಹಕಾರ ನೀಡಲು ಈ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ನನ್ನ ಜಾತಿ ಪ್ರಮಾಣ ಪತ್ರದ ಪ್ರಕರಣ ಮಾತ್ರ ಕೇವಲ 10 ದಿನದಲ್ಲೇ ಜಿಲ್ಲಾಧಿಕಾರಿಗಳು ಇತ್ಯರ್ಥಗೊಳಿಸಿರುವ ಹಿಂದಿನ ಮರ್ಮವೇನು? ಎಂದು ಸ್ವಾಮಿ ಪ್ರಶ್ನೆ ಮಾಡಿದರು.
ನನ್ನ ಜಾತಿ ಪ್ರಮಾಣ ಪತ್ರದ ಪ್ರಕರಣ ಕೇವಲ 10 ದಿವಸದಲ್ಲೇ ಇತ್ಯರ್ಥಗೊಳಿಸಿದ ಜಿಲ್ಲಾಧಿಕಾರಿಗಳು ಪ್ರತೀಕ ತಂದೆ ಪ್ರಭು ಚವ್ಹಾಣ ಅವರ ಜಾತಿ ಪ್ರಮಾಣದ ಪ್ರಕರಣ ಎರಡು ವರ್ಷಗಳಾದರೂ ತನಿಖೆ ಏಕೆ ಕೈಗೊಂಡಿರುವುದಿಲ್ಲ ನನ್ನ ಪ್ರತಿವಾದಿಗಳು ಸಹಾಯಕ ಆಯುಕ್ತರನ್ನು, ತಹಸಿಲ್ಧಾರರನ್ನು ಕಂದಾಯ ನಿರೀಕ್ಷಕರನ್ನು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಕರೆದು ವಿಚಾರಣೆ ಮಾಡಲಿಲ್ಲ. ಅಷ್ಟೊಂದು ವೇಗವಾಗಿ ಪ್ರಕರಣ ಇತ್ಯರ್ಥಗೊಳಿಸುವ ಅವಶ್ಯಕತೆ ಏನಿತ್ತು? ಮಾರ್ಚ್ 14, 2023 ರಂದು ನನಗಲ್ಲದೆ ನಮ್ಮ ಮೂರು ಮಕ್ಕಳಿಗೆ ಬೇಡಜಂಗಮ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ನನ್ನ ಪ್ರಮಾಣ ಪತ್ರ ರದ್ದುಗೊಳಿಸುವುದಾದರೆ ನಮ್ಮ ಮಕ್ಕಳಿಗೆ ಏಕೆ ನೀಡಿದಿರಿ?
ಜಾತಿ ಪ್ರಮಾಣ ಪತ್ರ ರದ್ದುಗೊಳಿಸಲು 4ಎಫ್ ಅಡಿಯಲ್ಲಿ ಅವಕಾಶ ಇರುವುದಿಲ್ಲ. ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಕಳಿಸಿ, ವಿಚಾರಣೆ ಮಾಡಲು ಹೇಳಿ ಅರ್ಜಿ ಹಾಕಿಕೊಂಡಿದ್ದೇವೆ. ಆದರೆ ಅದನ್ನೂ ಪರಿಗಣಿಸಿಲ್ಲ. ನಿಮ್ಮ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ ವಿಚಾರಗಳನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಪ್ರಭು ಚವ್ಹಾಣ ಅವರಿಗೆ ಹಾಗೂ ಅವರ ಆಪ್ತರಿಗೆ ಹೇಗೆ ಗೊತ್ತಾಗುತ್ತದೆ. ದಾಖಲಾತಿಗಳನ್ನು ನೇರವಾಗಿ ಕಳುಹಿಸಲಾಗುತ್ತದೆಯೇ? ಪ್ರತೀಕ ತಂದೆ ಪ್ರಭು ಚವ್ಹಾಣ ಅವರ ಪ್ರಕರಣ ಸಿಆರ್‍ಇ ಸೆಲ್‍ನಲ್ಲಿ ವಿಚಾರಣೆ ಮುಗಿದು ಅವರು ಹೊರರಾಜ್ಯದವರು ಎಂದು ವರದಿ ಬಂದಿದ್ದರೂ ದಲಿತ ಸಂಘರ್ಷ ಸಮಿತಿಯವರು ಏಕೆ ಹೋರಾಟ ಮಾಡಲಿಲ್ಲ?
ಔರಾದ ತಾಲೂಕಿನಲ್ಲಿ ನಿಜವಾದ ದಲಿತರಿಗೆ ಸಿಗಬೇಕಾದ ಸೌಲಭ್ಯಗಳಿಂದ ದಲಿತರು ವಂಚಿರಾಗಿದ್ದರೂ ಸುಳ್ಳು ಜಾತಿ ಪ್ರಮಾಣ ಪತ್ರ ಹೋರಾಟ ಸಮಿತಿಯವರು ಅಥವಾ ದಲಿತ ಸಂಘರ್ಷ ಸಮಿತಿಯವರು ಏಕೆ ಹೋರಾಟ ಮಾಡಲಿಲ್ಲ? ಎಂದು ರವೀಂದ್ರ ಸ್ವಾಮಿ ಪ್ರಶ್ನಿಸಿದರು.
ಆದ್ದರಿಂದ ನನ್ನ ಏಕತಾ ಫೌಂಡೇಶನ್ ಕಾರ್ಯಕರ್ತರು, ನನ್ನ ಕ್ಷೇತ್ರದ ಮತದಾರರು, ಹಿತೈಷಿಗಳು ಯಾವುದಕ್ಕೂ ಎದೆಗುಂದದೆ ಧೈರ್ಯದಿಂದ ಇರಬೇಕು. ಸಂವಿಧಾನದ ಮೇಲೆ ಹಾಗೂ ಮಾನ್ಯ ನ್ಯಾಯಾಲಯದ ಮೇಲೆ ನನಗೆ ಸಂಪೂರ್ಣ ಭರವಸೆ ಇದೆ. ನಾನು ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ. ನನ್ನ ಹೋರಾಟ ಕ್ಷೇತ್ರದ ಜನರ ಪರವಾಗಿ ನಿರಂತರವಾಗಿ ನಡೆಯಲಿದೆ. ನನ್ನ ಜಾತಿ ಪ್ರಮಾಣ ಪತ್ರಕ್ಕೆ ಯಾವುದೇ ಧಕ್ಕೆ ಇಲ್ಲ. ಪ್ರಭು ಚವ್ಹಾಣ ಮುಕ್ತ ಔರಾದ ಕ್ಷೇತ್ರ ನಿರ್ಮಾಣ ಮಾಡುವುದೇ ನನ್ನ ಗುರಿಯಾಗಿದೆ ಎಂದು ತಿಳಿಸಿದರು. ಬೇಡ ಜಂಗಮ ಸಮಾಜದ ಅಧ್ಯಕ್ಷರಾದ ಸಿದ್ರಾಮಯ್ಯ ಸ್ವಾಮಿ,ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳಕರ್ ಹಾಗೂ ಇತರರು ಉಪಸ್ಥಿತರಿದ್ದರು.