ಜಿಲ್ಲಾಧಿಕಾರಿಯಿಂದ ಆಹಾರ ಕಿಟ್ ವಿತರಣೆ

ರಾಯಚೂರು, ಮೇ.೨೮- ಕೋವಿಡ್-೧೯ ಸಂಕಷ್ಟದ ಕಾಲದಲ್ಲಿ ದೇವದಾಸಿಯರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ವರ್ಗದ ಮಹಿಳೆಯರಿಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಅಜೀಂ ಪ್ರೇಮ್ ಜೀ ಪೌಂಡೇಶನ್ ವತಿಯಿಂದ ಫುಡ್ ಕಿಟ್ ವಿತರಿಸಿದರು.
ಆಹಾರ ಕಿಟ್‌ನಲ್ಲಿ ೧೦ ಕೆಜಿ ಅಕ್ಕಿ, ೫ ಕೆಜಿ ಗೋಧಿ ಹಿಟ್ಟು, ೧ ಸೂರ್ಯಕಾಂತಿ ಎಣ್ಣೆ ಪ್ಯಾಕೆಟ್, ಸಕ್ಕರೆ ಸೇರಿದಂತೆ ಇದ್ದ ಅಗತ್ಯವಸ್ತುಗಳ ಕಿಟ್‌ಗಳನ್ನು ಜಿಲ್ಲಾಧಿಕಾರಿಯವರು ಫಲಾನುಭವಿಗಳಿಗೆ ನೀಡಿದರು.
ಅಜಿಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಮೊದಲ ಹಂತದಲ್ಲಿ ರಾಯಚೂರು ನಗರದಲ್ಲಿ ೯೪೩, ಮನ್ವಿ ೬೫೦, ಸಿರವಾರ ೧೯೯, ಸಿಂಧನೂರು ೫೫೯, ಮಸ್ಕಿ ೧೪೦, ಲಿಂಗಸಗೂರು ೫೯೮ ಹಾಗೂ ದೇವದುರ್ಗ ತಾಲೂಕಿನಲ್ಲಿ ೩೯೬ ಸೇರಿದಂತೆ ಒಟ್ಟು ೩,೩೭೫ ದೇವದಾಸಿ, ಲೈಂಗಿಕ ಕಾರ್ಯಕರ್ತರು, ಮಂಗಳ ಮುಖಿಯರು ಹಾಗೂ ಎಚ್.ಐ.ವಿ ಸೋಂಕಿತ ಮಹಿಳೆಯರಿಗೆ ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಅಜೀಂ ಪ್ರೇಮ್ ಜೀ ಫೌಂಡೇಶನ್ ಸಂಯೋಜಕರಾದ ಅಡಿವೆಪ್ಪ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಡಿ.ವೀರನಗೌಡ, ದೇವದಾಸಿ ಪುನರ್ ವಸತಿ ನಿಗಮದ ಜಿಲ್ಲಾ ಯೋಜನಾಧಿಕಾರಿ ಜಿ.ಬಿ. ಗೋಪಾಲ ನಾಯಕ, ಜಿಲ್ಲಾ ಎಡ್ಸ್ ನಿಯಂತ್ರಣ ಅಧಿಕಾರಿ ಡಾ. ಸುರೇಂದ್ರ ಬಾಬು, ಅಜೀಮ್ ಪ್ರೇಮ್ ಜೀ ಫೌಂಡೇಶನ್ ಸಹ ಸಂಯೋಜಕ ಶ್ರೀನಿವಾಸ ಕುಲಕರ್ಣಿ ಸೇರಿದಂತೆ ಇತರರು ಇದ್ದರು.