
ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ.24: ವಿಶ್ವವಿಖ್ಯಾತ ಹಂಪಿಯಲ್ಲಿ ಜಿ-20 ಶೃಂಗಸಭೆ ನಡೆಯಲಿದ್ದು, ಕೇವಲ ಸಭೆಗೆ ಸೀಮಿವಾಗದೇ ಪ್ರವಾಸಿಗರಿಗೂ ಅನುಕೂಲವಾಗುವಂತೆ ಶಾಶ್ವತ ಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟೇಶ್ ಟಿ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಜಿ-20 ಶೃಂಗಸಭೆಯ ಅಂಗವಾಗಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಪೂರ್ವಸಿದ್ಧತಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುವ ಶೃಂಗಸಭೆ ಇದಾಗಿದ್ದು, ವಿಶ್ವಪಾರಂಪರಿಕ ತಾಣವಾದ ಹಂಪಿಯ ಹಿರಿಮೆಯನ್ನು ಹೆಚ್ಚಿಸಲಿದೆ. ಶೃಂಗಸಭೆಗೆ ಅಗತ್ಯವುಳ್ಳ ಸಕಲ ಮೂಲಸೌಕರ್ಯವನ್ನು ಒದಗಿಸಲು ಇಲಾಖೆಗಳು ಸಿದ್ಧತೆ ಕೈಗೊಳ್ಳಬೇಕು. ಹಂಪಿಯಲ್ಲಿ ಒದಗಿಸುವ ಮೂಲಸೌಕರ್ಯಗಳು ಕೇವಲ ಶೃಂಗಸಭೆಗೆ ಮಾತ್ರ ಸೀಮಿತವಾಗದೇ ಹಂಪಿಯಲ್ಲಿ ಶಾಶ್ವತವಾಗಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇಲಾಖಾವಾರು ಸೌಕರ್ಯ ಒದಗಿಸಲು ಕ್ರಮ:
ಹಂಪಿಯಲ್ಲಿ ಒದಗಿಸುವ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆಯಾ ಇಲಾಖೆಯ ಅಧೀನ ಕಾರ್ಯದರ್ಶಿಗಳಿಗೆ ಅಗತ್ಯ ಅನುದಾನ ಒದಗಿಸಲು ಪ್ರಸ್ತಾವನೆ ಕಳುಹಿಸಿಕೊಡಬೇಕು. ಶೃಂಗಸಭೆ ಹಾಗೂ ಪ್ರವಾಸಿಗರಿಗೂ ಅನುಕೂಲ ವಾತಾವರಣ ಪರಿಗಣಿಸಿ ಯೋಜನೆ ಸಿದ್ದಪಡಿಸಿ ಪ್ರಸ್ತಾವನೆ ಕಳುಹಿಸಿಕೊಡಬೇಕು ಎಂದು ಸೂಚಿಸಿದರು.
ಹಂಪಿಯಲ್ಲಿ ಕುಡಿಯುವ ನೀರು, ಸ್ವಚ್ಛತೆ, ಸುಗಮ ಸಂಚಾರ, ವಿದ್ಯುತ್ ವ್ಯವಸ್ಥೆ ಒದಗಿಸಲು ಇಲಾಖೆ ಕ್ರಮವಹಿಸಬೇಕು, ಅದೇ ರೀತಿಯಾಗಿ ಹಂಪಿಯಲ್ಲಿ ಸೂಕ್ತ ನೆಟ್‍ವರ್ಕ್ ವ್ಯವಸ್ಥೆ ಹಾಗೂ ಸಂಪರ್ಕ ಅಧಿಕಾರಿಗಳ ನಿಯೋಜನೆ ಸೇರಿದಂತೆ ಅಗತ್ಯ ಪ್ರವಾಸಿ ಮಾರ್ಗದರ್ಶಿಗಳನ್ನು ಸಹ ನಿಯೋಜಿಸಬೇಕು. ಇದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸೂಕ್ತಕ್ರಮ ವಹಿಸಬೇಕು. ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಹಂಪಿಯಲ್ಲಿ ಕಾಮಗಾರಿಯ ಸಮಯದಲ್ಲಿ ಭಾರತೀಯ ಪುರಾತತ್ವ ಸರ್ವೆಕ್ಷಣ ಇಲಾಖೆ (ಎಎಸ್‍ಐ) ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಹೊಂದಿರಬೇಕು ಎಂದು ತಿಳಿಸಿದರು.
ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಯಾವುದೇ ಕಾಮಗಾರಿಗಳು ನಡೆಯುತ್ತಿದ್ದಲ್ಲಿ ಶೃಂಗಸಭೆ ಆರಂಭಕ್ಕೂ ಮುನ್ನ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಅವರು ಮಾತನಾಡಿ ಶೃಂಗಸಭೆ ಅಂಗವಾಗಿ 3 ಹಂತದ ಭದ್ರತೆಯನ್ನು ನಿಯೋಜಿಸಲಾಗುತ್ತದೆ, ಅಗತ್ಯ ಸ್ಥಳಗಳಲ್ಲಿ ಸೂಚನ ಫಲಕಗಳನ್ನು, ಸಿಸಿ ಕ್ಯಾಮರ್‍ಗಳನ್ನು ಅಳವಡಿಸಬೇಕು ಸಂಚಾರ ತೊಂದರೆಯಾಗದಂತೆ ಕ್ರಮವಹಿಸಲು ಸಹಕರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಹಂಪಿ ವಿಶ್ವಪರಂಪರಾ ಅಭಿವೃದ್ಧಿ ನಿರ್ವಹಣಾ ಪ್ರಾಧಿಕಾರ ಆಯುಕ್ತ ಸಿದ್ಧರಾಮೇಶ್ವರ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ, ತಹಶೀಲ್ದಾರ್ ಪ್ರತಿಭಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.