ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಯೋಜನೆ ಸದುಪಯೋಗಕ್ಕೆ ಕರೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಜು.19: ತಾಲ್ಲೂಕು ಮಟ್ಟದ ಅಧಿಕಾರಿಗಳು ಹಳ್ಳಿಗಳಲ್ಲಿ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವುದೇ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಎನ್ನುವ ಕಾರ್ಯಕ್ರಮ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ ಶಿವಕುಮಾರ ಬಿರಾದಾರ್ ಹೇಳಿದರು.
ತಾಲ್ಲೂಕಿನ ಚಿಗಟೇರಿ ಹೋಬಳಿ ವ್ಯಾಪ್ತಿಯ ನಿಚ್ಚವ್ವನಹಳ್ಳಿ ಗ್ರಾಮದಲ್ಲಿನಡೆದಜಿಲ್ಲಾಧಿಕಾರಿಗಳ ನಡೆಗೆ ಹಳ್ಳಿ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರ ಸಮಸ್ಯೆ ಗಳಿಗೆ ಅಧಿಕಾರಿಗಳು ಹಳ್ಳಿಗಳ ಮನೆ ಮನೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿ ಸಂಬಂಧಿಸಿದ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಕಂದಾಯ, ಆರೋಗ್ಯ, ಶಿಕ್ಷಣ, ಮಕ್ಕಳ ಅಭಿವೃದ್ಧಿ ಕೃಷಿ, ತೋಟಗಾರಿಕೆ, ಪೊಲೀಸ್ ಹಾಗೂ ಅರಣ್ಯ ಇಲಾಖೆಗಳು ನೇರವಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿವೆ.
ಸಾಮಾಜಿಕ ಭದ್ರತೆ, ಪಿಂಚಣಿ, ಸಂಧ್ಯಾ ಸುರಕ್ಷೆ, ಸರ್ಕಾರಿ ಭೂ ಒತ್ತುವರಿಗಳ ಅರ್ಜಿಗಳನ್ನು ಕಂದಾಯ ಇಲಾಖೆಗೆ, ಶಾಲಾ ಕಾಲೇಜುಗಳ ಸಮಸ್ಯೆಗಳು ಶಿಕ್ಷಣ ಇಲಾಖೆ, ಬೆಳೆ ಪರಿಹಾರ ಕೃಷಿ ಇಲಾಖೆ ಹೀಗೆ ಆಯಾ ಇಲಾಖೆ ಅಧಿಕಾರಿಗಳು ಹಳ್ಳಿಗಳಲ್ಲಿ ವಾಸ್ತವ್ಯ ಮಾಡಿರುವುದರಿ0ದ ಶೀಘ್ರ ಪರಿಹಾರ ಪಡೆಯಬಹುದು ಎಂದರು.
ಆರೋಗ್ಯ ಇಲಾಖೆಯಿಂದ 30ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಕೋವಿಡ್‍ಗಾಗಿ ಬೂಸ್ಟರ್ ಡೋಸ್ ಲಸಿಕೆ ಹಾಕಲಾಯಿತು. ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ವಿವಿಧ ಧಾನ್ಯಗಳ ಪೋಷಕಾಂಶಗಳ ವಸ್ತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಪಿಂಚಣಿ, ವಿಕಲ ಚೇತನರಿಗೆ ಕಾರ್ಡ್‍ಗಳನ್ನು ವಿತರಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಅಡವಿಮಲ್ಲಾಪುರ ಗ್ರಾಮಸ್ಥರು ಮೂಲಭೂತ ಸೌಕರ್ಯಗಳ ಕೊರತೆಯಿದ್ದು ಗ್ರಾಮಕ್ಕೆ ಅಧಿಕಾರಿಗಳು ಆಗಮಿಸಿ ಪರಿಹಾರ ಒದಗಿಸಬೇಕು ಮನವಿ ಸಲ್ಲಿಸಿದರು.
ಗ್ರಾ ಪಂ ಅಧ್ಯಕ್ಷೆ ಗಂಗಿಬಾಯಿ, ಉಪಾಧ್ಯಕ್ಷ ಕೆ.ಆನಂದಪ್ಪ, ತಾಲ್ಲೂಕು ಪಂಚಾಯ್ತಿ ಅಧಿಕಾರಿ ವಿಜಯ್ ಕುಮಾರ, ಎಡಿಎಲ್‍ಆರ್ ಬಿಳೆಸಪ್ಪ,ಡಾ.ವೆಂಕಟೇಶ್, ಸಿಡಿಪಿಓ ಹರೀಶ್,ನಾಗರತ್ನ ದೊಡ್ಡಬೆಣ್ಣೆ, ವೈದ್ಯಾಧಿಕಾರಿ ಆರ್.ಧನರಾಜ್, ಸಮಾಜ ಕಲ್ಯಾಣ ಇಲಾಖೆಯ ಭೀಮಪ್ಪ, ಪಿಡಿಓ ಮುಕ್ತಾರ್ ಭಾಗವಹಿಸಿದ್ದರು.