ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ

ವಿಜಯಪುರ,ಜು೧೭:ಹೋಬಳಿಯ ಮಂಡಿಬೆಲೆ ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಕಂದಾಯ ಇಲಾಖೆ, ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಶಾಸಕ ನಿಸರ್ಗನಾರಾಯಣಸ್ವಾಮಿ, ತಹಶೀಲ್ದಾರ್ ಶಿವರಾಜ್, ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತ ಕೋರಿದರು. ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಅಧಿಕಾರಿಗಳ ತಂಡ ಗ್ರಾಮದ ಪ್ರದಕ್ಷಿಣೆ ಮಾಡಿತು. ಕಂದಾಯ, ರೇಷ್ಮೆ, ಪಶುಪಾಲನೆ, ಸಮಾಜ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ, ಕಾರ್ಮಿಕ ಇಲಾಖೆಯಿಂದ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಣೆ ಮಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರು ಪೋಷಣಾ ಅಭಿಯಾನದ ಕುರಿತು ಜಾಗೃತಿ ಮೂಡಿಸಿದರು. ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಕೋವಿಡ್ ಲಸಿಕೆ ಹಾಕಿದರು. ಆರೋಗ್ಯ ಇಲಾಖೆಯಲ್ಲಿ ಸಿಗುವಂತಹ ಸೌಲತ್ತುಗಳ ಕುರಿತು ಮಾಹಿತಿ ನೀಡಿದರು.
ಸಂಗೀತ ನಿರ್ದೇಶಕ ಎಂ.ವಿ.ನಾಯ್ಡು, ಹಾಗೂ ಗಾಯಕರಾದ ನರಸಿಂಹಪ್ಪ, ಮಹೇಶ್, ಶೈಲಜಾ ಅವರಿಂದ ಗೀತಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ರಂಗಭೂಮಿ ಕಲಾವಿದರು ಕಾರ್ಯಕ್ರಮದಲ್ಲಿ ಪೌರಾಣಿಕ ನಾಟಕಗಳ ತುಣುಕುಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು.
ಈ ಹಿಂದೆ ಕೋರಮಂಗಲ ಮಂಡಲ್ ಪಂಚಾಯಿತಿ ಇದ್ದಾಗ ಪ್ರಧಾನರು ಕೊಟ್ಟಿರುವ ಹಕ್ಕುಪತ್ರಗಳನ್ನು ಪಂಚಾಯಿತಿಯಲ್ಲಿ ಖಾತೆಗಳು ಮಾಡುತ್ತಿಲ್ಲ. ಎಂದು ಕೆಲವರು ತಮ್ಮ ಸಮಸ್ಯೆ ಹೇಳಿಕೊಂಡರು. ಈಗ ನೋಂದಣಿ ಬೇಕಾಗಿಲ್ಲ. ನೇರವಾಗಿ ಖಾತೆ ಮಾಡಿಸಿಕೊಳ್ಳಿ ಎಂದರು.ಕಾಲೋನಿ ವೀಕ್ಷಣೆಗೆ ತೆರಳಿದ್ದಾಗ ಕೆಲವರಿಗೆ ಪಿಂಚಣಿ ಮಂಜೂರಾತಿ ಪತ್ರಗಳನ್ನು ಮನೆ ಬಾಗಿಲಲ್ಲೆ ವಿತರಣೆ ಮಾಡಿದರು.
ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಜನರ ಮನೆ ಬಾಗಿಲಿಗೆ ಆಡಳಿತವನ್ನು ಕೊಂಡೊಯ್ಯಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಈ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ.ವಸಂತಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ, ಉಪಾಧ್ಯಕ್ಷ ಆರ್.ಕೇಶವ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋಪಾಲರಾವ್, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾರಾಯಣಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜು, ವರಲಕ್ಷ್ಮೀ, ವಿಶ್ವನಾಥ್, ಮಂಜುಳಾ, ಮುನಿಪಾಪಣ್ಣ, ಮಾಸಪ್ಪ, ಎನ್.ಸುಜಾತಮ್ಮ, ಅಮೃತ, ಅಧಿಕಾರಿಗಳಾದ ಕೆ.ಎಚ್.ವೀಣಾ, ಮಂಜುಳಾ, ನಾಗವೇಣಿ, ನರೇಂದ್ರಬಾಬು, ಪವಿತ್ರ.ಯು.ಜೆ, ಉಮಾಶಂಕರ್, ನರಾಜ್ ಸರ್ವೆ ಇಲಾಖೆ, ಆದರ್ಶ್, ಶ್ರೀಧರ್, ಸೋಮಶೇಖರ್, ಅಂಬಿಕ, ರಾಜಸ್ವ ನಿರೀಕ್ಷಕರಾದ ಸತ್ಯನಾರಾಯಣ, ಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಸುನೀಲ್, ಮಾಲ, ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ, ಗ್ರಾಮ ಸಹಾಯಕರು ಇದ್ದರು.
ವಿಜಯಪುರ ಹೋಬಳಿ ಮಂಡಿಬೆಲೆ ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ-ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಪಿಂಚಣಿ ಮಂಜೂರಾತಿ ಪತ್ರಗಳನ್ನು ಶಾಸಕ ನಿಸರ್ಗ ನಾರಾಯಣಸ್ವಾಮಿ ವಿತರಣೆ ಮಾಡಿದರು.
ಅರಣ್ಯ ಇಲಾಖೆಯವರ ಭೂಮಿಯನ್ನು ಜಂಟಿ ಸರ್ವೆ ಮೂಲಕ ಗುರ್ತಿಸಿಕೊಳ್ಳುವಂತೆ ರೈತರು ಅಧಿಕಾರಿಗಳಿಗೆ ಒತ್ತಾಯಿಸಿದರು.