ಜಿಲ್ಲಾಧಿಕಾರಿಗಳ ನಡೆ ಮರತೂರ ಗ್ರಾಮದ ಕಡೆ ಯಶಸ್ವಿ

ಶಹಾಬಾದ:ನ.20: ತಹಸೀಲ್ದಾರ ನಡೆ ಹಳ್ಳಿ ಕಡೆ ಹಿನ್ನೆಲೆಯಲ್ಲಿ ಶನಿವಾರ ತಹಸೀಲ್ದಾರ ಸುರೇಶ ವರ್ಮಾ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಂದ ಸಮಸ್ಯೆಗಳನ್ನು ಆಲಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರೇ ಇನ್ನೂ ಕೆಲವು ಸಮಸ್ಯೆಗಳಿಗೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎನ್ನುವ ಕಾರ್ಯಕ್ರಮಕ್ಕೆ ಶನಿವಾರ ತಾಲೂಕಿನ ಮರತೂರ ಗ್ರಾಮಕ್ಕೆ ಇಡೀ ತಾಲೂಕಾಡಳಿತದೊಂದಿಗೆ ಗ್ರಾಮಕ್ಕೆ ತೆರಳಿದಾಗ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿಕೊಂಡು ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಸ್ಯೆಗಳಿಗೆ ಪರಿಹರಿಸಲು ಸಾಕ್ಷಿಯಾದರು. ಕಾರ್ಯಕ್ರಮಕ್ಕೆ ಬಂದ ಸಾರ್ವಜನಿಕರಿಗೆ ಟೆಂಟ್ ಹಾಕಲಾಗಿತ್ತು. ಕುಡಿಯುವ ನೀರಿನ, ಊಟದ,ಆಸನಗಳ ವ್ಯವಸ್ಥೆ ಹಾಗೂ ಮೈಕ್ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು.

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಅಧಿಕಾರಿಗಳು ಸುಮಾರು 46 ಅಹವಾಲುಗಳನ್ನು ಸ್ವೀಕರಿಸಿದರು. ಸ್ಥಳದಲ್ಲಿಯೇ 29 ಅಹವಾಲುಗಳನ್ನು ಸ್ಥಳದಲ್ಲಿಯೇ ಪರಿಹಾರ ದೊರಕಿಸಿದರು. ವೃದ್ಯಾಪ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ಅನೇಕ ಪಿಂಚಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಮಂಜೂರು ಮಾಡಲಾಯಿತು. ಕೆಲವೊಂದು ಪ್ರಮಾಣ ಪತ್ರವನ್ನು ಸ್ಥಳದಲ್ಲಿಯೇ ವಿತರಿಸುವ ಕೆಲಸ ಮಾಡಿದ್ದು ಮಾತ್ರ ಗ್ರಾಮಸ್ಥರ ಪ್ರಶಂಸೆಗೆ ಕಾರಣವಾಯಿತು.

ಇನ್ನುಳಿದ 17 ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಪಂ ಅಧ್ಯಕ್ಷ ಗುರುನಾಥ ಕಂನಾನೂರ, ಗ್ರಾಮದ ಮುಖಂಡರಾದ ಅಜಿತಕುಮಾರ ಪಾಟೀಲ, ಸಿದ್ದುಗೌಡ ಅಫಜಲಪೂರಕರ್,ಶೇರಲಿ, ಅಪ್ಪಾಸಾಹೇಬ ಪಾಟೀಲ, ವಿನೋದಕುಮಾರ, ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ, ಉಪತಹಸೀಲ್ದಾರ ಮಲ್ಲಿಕಾರ್ಜುನರೆಡ್ಡಿ, ತಾಪಂ ಇಓ ಬಸಲಿಂಗಪ್ಪ ಡಿಗ್ಗಿ, ಸಿಡಿಪಿಓ ಬಿ.ಎಸ್.ಹೊಸಮನಿ, ಕೃಷಿ ಅಧಿಕಾರಿ ರವೀಂದ್ರಕುಮಾರ, ಕಂದಾಯ ಅಧಿಕಾರಿ ಹಣಮಂತರಾವ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ,ಶಿಕ್ಷಣ ಸಂಯೋಜಕ ಶ್ರೀಧರ ರಾಠೋಡ, ಗ್ರಾಮ ಲೆಕ್ಕಿಗರು ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.


ಗ್ರಾಮಗಳ ಜನರು ಪಿಂಚಣಿ, ವೃದ್ಧಾಪ್ಯ, ವಿಧವಾ ವೇತನದಂತಹ ಸಮಸ್ಯೆ ಎದುರಿಸಬಾರದು. ಪ್ರತಿ ಸಮಸ್ಯೆಗೆ ಪರಿಹಾರಕ್ಕಾಗಿ ತಾಲೂಕಾ ಕೇಂದ್ರಕ್ಕೆ ಬರುವಂತಾಗಬಾರದು.ಬದಲಾಗಿ ಸ್ಥಳದಲ್ಲೇ ಸಾಧ್ಯವಾದಷ್ಟು ಪರಿಹಾರ ದೊರೆಯಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭಿಸುತ್ತಿದ್ದು ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕು-ಸುರೇಶ ವರ್ಮಾ ತಹಸೀಲ್ದಾರ.