ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ

ಮೈಸೂರು,ನ.30:- ಶೈಕ್ಷಣಿಕ ಧನಸಹಾಯ ಸೌಲಭ್ಯ ಪಡೆಯಲು ಉಂಟಾಗಿರುವ ತೊಂದರೆ ಹಾಗೂ ವಿಳಂಬ ನೀತಿ ವಿರೋಧಿಸಿ ಇಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಸಮಿತಿಯು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ಮೈಸೂರಿನಲ್ಲಿಯೂ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಫಲಾನುಭವಿ ಕಟ್ಟಡ ಕಾರ್ಮಿಕರಿಗೆ ಹಲವಾರು ಸೌಲಭ್ಯಗಳನ್ನು ನೀಡುವುದರಲ್ಲಿ ಬಹುಶಃ ಇಡೀ ದೇಶದಲ್ಲೇ ಮಾದರಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಅದರಲ್ಲೂ ವಿಶೇಷವಾಗಿ ಶೈಕ್ಷಣಿಕ ಧನಸಹಾಯ ಸೌಲಭ್ಯವನ್ನು ನರ್ಸರಿಯಿಂದ ಅತ್ಯುನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ನೀಡುವುದರಲ್ಲಿ ಕರ್ನಾಟಕ ರಾಜ್ಯದ ಕಲ್ಯಾಣ ಮಂಡಳಿ ಮೊದಲ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ. ಆದರೆ ಸೌಲಭ್ಯ ಕಲ್ಪಿಸುವುದರಲ್ಲಿ ಅನುಸರಿಸುವ ರೀತಿ ಮತ್ತು ನಿಯಮಗಳ ಬದಲಾವಣೆಯಿಂದ 1996 ರ ಕಾಯ್ದೆಗೆ ವಿರುದ್ಧವಾಗಿ ಮಂಡಳಿ ಜಾರಿ ಮಾಡಲು ಹೊರಟಿರುವುದು ವಿಷಾದನೀಯ ಕಾಯ್ದೆಯನ್ವಯ ಎಂದರು.
ಮಂಡಳಿಯ ಸೌಲಭ್ಯಗಳನ್ನು ಫಲಾನುಭವಿ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂದಿದ್ದರೂ ಫಲಾನುಭವಿ ಕಾರ್ಮಿಕರ ಮಕ್ಕಳ ಖಾತೆಗೆ ಜಮಾ ಮಾಡುವ ಹೊಸ ನೀತಿ ಕಾಯ್ದೆಯ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಹಲವಾರು ಪತ್ರಗಳನ್ನು ಮಂಡಳಿಗೆ ಕಳುಹಿಸಿದ್ದು ಹಾಗೂ ಕಟ್ಟಡ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡರು ಮಂಡಳಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರೂ ಏನೂ ಪ್ರಯೋಜನವಾಗಿಲ್ಲ. ಜೊತೆಗೆ ಸೌಲಭ್ಯ ಪಡೆಯಲು ತುಂಬಾ ವಿಳಂಬವಾಗುತ್ತಿದೆ.
ಆದ್ದರಿಂದ ಕಲ್ಯಾಣ ಮಂಡಳಿಯ ತೀರ್ಮಾನವನ್ನು ವಿರೋಧಿಸಿ ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಸಮಿತಿಯು ಇಂದು ರಾಜ್ಯಾದ್ಯಂತ ತಾಲ್ಲೂಕು/ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಿತ್ತು. ಅದರಂತೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು. ತಾವು ಶೈಕ್ಷಣಿಕ ಧನಸಹಾಯವನ್ನು ಕಾಯ್ದೆಯಡಿ ಇದುವರೆಗೂ ಇದ್ದ ರೂಢಿಯಂತೆ ತುರ್ತಾಗಿ ಸೌಲಭ್ಯ ವಿತರಿಸಲು ಮತ್ತು ಫಲಾನುಭವಿ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡುವ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಕೆ.ಎಸ್.ರೇವಣ್ಣ, ಪ್ರಧಾನಕಾರ್ಯದರ್ಶಿ ಕೆ.ಜಿ.ಸೋಮರಾಜೇ ಅರಸ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.