ಜಿಲ್ಲಾಧಿಕಾರಿಗಳ ಕಚೇರಿಗೆ ಮಾಜಿ ಶಾಸಕ ಬಿ.ಆರ್. ಪಾಟೀಲ್ ನೇತೃತ್ವದಲ್ಲಿ ಮುತ್ತಿಗೆ: ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ ಭರವಸೆ

ಕಲಬುರಗಿ,ನ.10: ಈಗಾಗಲೇ ಬೆಳೆದು ನಿಂತ ಕಬ್ಬು ಎಲ್ಲಿ ಒಣಗಿ ಹೋಗುತ್ತದೆ ಎಂಬ ಆತಂಕದಲ್ಲಿ ರೈತರು ಒಳಗಾಗಿದ್ದು, ಕೂಡಲೇ ಆಳಂದ್ ತಾಲ್ಲೂಕಿನ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವಂತೆ ಮತ್ತು ಕಬ್ಬಿಗೆ 3000ರೂ.ಗಳ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಮಾಜಿ ಶಾಸಕ ಬಿ.ಆರ್. ಪಾಟೀಲ್ ಅವರ ನೇತೃತ್ವದಲ್ಲಿ ರೈತರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಕಬ್ಬಿನ ಲಾರಿಗಳೊಂದಿಗೆ ಆಗಮಿಸಿ ಮುತ್ತಿಗೆ ಹಾಕಿದರು.
ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಬಿ.ಆರ್. ಪಾಟೀಲ್ ಅವರೊಂದಿಗೆ ಮಾತನಾಡಿ, ಸಕ್ಕರೆ ಕಾರ್ಖಾನೆಯನ್ನು ಸ್ಥಗಿತಗೊಳಿಸುವುದಕ್ಕೆ ಯಾವುದೇ ರೀತಿಯಲ್ಲಿ ಆದೇಶ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಂತರ ಬಿ.ಆರ್. ಪಾಟೀಲ್ ಅವರು ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷರಿಗೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಕಾರ್ಖಾನೆ ಪುನರಾರಂಭಿಸುವುದಾಗಿ ಭರವಸೆ ನೀಡಿದರು. ಕೊಟ್ಟ ಭರವಸೆಯಂತೆ ಶುಕ್ರವಾರ ಕಾರ್ಖಾನೆ ಆರಂಭವಾಗದೇ ಹೋದಲ್ಲಿ ಮತ್ತೆ ಪ್ರತಿಭಟನೆ ಮಾಡುವುದಾಗಿ ಬಿ.ಆರ್. ಪಾಟೀಲ್ ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಬಿ.ಆರ್. ಪಾಟೀಲ್ ಅವರು ಮಾತನಾಡಿ, ಶಾಸಕ ಸುಭಾಷ್ ಆರ್. ಗುತ್ತೇದಾರ್ ಅವರು ಕಬ್ಬಿಗೆ 2500ರೂ.ಗಳ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದಾರೆ. ಅವರ ಬೇಡಿಕೆಗೆ ನಾವೂ ಬೆಂಬಲಿಸುತ್ತೇವೆ. ಅದಕ್ಕಿಂತ ಹೆಚ್ಚಿನ ಬೆಲೆ ಕೊಟ್ಟರೂ ಸ್ವಾಗತಾರ್ಹ. ಆದಾಗ್ಯೂ, ಆ ಬೇಡಿಕೆಯನ್ನು ಇಟ್ಟುಕೊಂಡು ಕಾರ್ಖಾನೆ ಸ್ಥಗಿತಗೊಳಿಸುವುದು ಸರಿಯಲ್ಲ ಎಂದರು.
ಪ್ರಸಕ್ತ ಸಾಲಿನಲ್ಲಿ ಆಳಂದ್ ತಾಲ್ಲೂಕಿನ ಭೂಸನೂರಿನಲ್ಲಿರುವ ಎನ್‍ಎಸ್‍ಎಲ್ ಕಾರ್ಖಾನೆಯು ಯಾವಾಗಲೂ ಪಕ್ಕದ ಅಫಜಲಪುರ ತಾಲ್ಲೂಕಿನ ರೇಣುಕಾ ಸಕ್ಕರೆ ಕಾರ್ಖಾನೆಯವರು ಯಾವ ರೀತಿ ಪ್ರತಿ ಟನ್‍ಗೆ ದರ ನಿಗದಿಪಡಿಸುತ್ತಾರೆಯೋ ಅವರನ್ನು ಹಿಂಬಾಲಿಸಿ ದರ ನಿಗದಿಪಡಿಸುತ್ತಿದ್ದರು. ಆದಾಗ್ಯೂ, ಪ್ರಸಕ್ತ ಸಾಲಿನಲ್ಲಿ ತಮ್ಮ ಇಳುವರಿ ಕಡಿಮೆ ತೋರಿಸಿ ಸದರಿ ರೇಣುಕಾ ಸಕ್ಕರೆ ಕಾರ್ಖಾನೆಗಿಂತ ಕಡಿಮೆ ದರ ನಿಗದಿಪಡಿಸಿದ್ದಾರೆ. ಮೇಲಾಗಿ ತಾಲ್ಲೂಕಿನಾದ್ಯಂತ ರೈತರಿಂದ ಸಾವಿರಾರು ಟನ್ ಕಬ್ಬು ಕಟಾವು ಮಾಡಿಸಿ ಅದನ್ನು ಕಾರ್ಖಾನೆಯಲ್ಲಿ ನುರಿಸದೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಮಾತಿಗೆ ಜೋತು ಬಿದ್ದು, ಕಾರ್ಖಾನೆಯನ್ನು ಪ್ರಾರಂಭಿಸದೇ ರೈತರನ್ನು ಬೀದಿ ಪಾಲು ಮಾಡಲಾಗುತ್ತಿದೆ. ಆದ್ದರಿಂದ ಕೂಡಲೇ ಕಾರ್ಖಾನೆ ಪ್ರಾರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ಭೂಸನೂರಿನಲ್ಲಿ ಪ್ರತಿಭಟನೆಕಾರರು ವಶಕ್ಕೆ: ಆಳಂದ್ ತಾಲ್ಲೂಕಿನ ಭೂಸನೂರಿನ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಗೆ ಟ್ರ್ಯಾಕ್ಟರ್‍ಗಳ ಸಮೇತ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಮಾಜಿ ಶಾಸಕ ಬಿ.ಆರ್. ಪಾಟೀಲ್ ಸೇರಿ ಹಲವು ರೈತರನ್ನು ಪೋಲಿಸರು ತಮ್ಮ ವಶಕ್ಕೆ ಪಡೆದರು.
ಈ ವೇಳೆ ಪೋಲಿಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದು ವಶಕ್ಕೆ ಪಡೆದವರನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಬಿ.ಆರ್. ಪಾಟೀಲ್ ಅವರು ಮಾತನಾಡಿ, ಕಬ್ಬು ಬೆಳೆಗಾರರ ಸಂಕಷ್ಟ ಸಕ್ಕರೆ ಕಾರ್ಖಾನೆಯವರಿಗೆ ಅರ್ಥ ಆಗುತ್ತಿಲ್ಲ. ಹಲವು ದಿನಗಳಿಂದ ಹೋರಾಟ ಮಾಡಲು ಬಂದರೂ ಸಹ ರೈತರಿಗೆ ಬೆಲೆ ಕೊಡದ ರೀತಿಯಲ್ಲಿ ಕಾರ್ಖಾನೆ ಆಡಳಿತ ಮಂಡಳಿ ನಡೆದುಕೊಂಡಿದೆ ಎಂದು ಆರೋಪಿಸಿದರು.
ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ ಅವರು, ಒಂದು ವೇಳೆ ನಾಳೆ ಕಾರ್ಖಾನೆ ಪ್ರಾರಂಭ ಮಾಡದಿದ್ದರೆ ನಾಡಿದ್ದು ಮತ್ತೆ ಹೋರಾಟ ಮುಂದುವರೆಸಲಾಗುವುದು ಎಂದು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.