ಜಿಲ್ಲಾಧಿಕಾರಿಗಳ ಕಚೇರಿಗೆ ನ.17ರಂದು ಕಬ್ಬು ಬೆಳೆಗಾರರಿಂದ ಮುತ್ತಿಗೆ

ಕಲಬುರಗಿ,ನ.15: ಸಮಸ್ಯೆಗಳ ಇತ್ಯರ್ಥಕ್ಕಾಗಿ ನವೆಂಬರ್ 17ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಪಾಟೀಲ್ ಅವರು ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ಎಲ್ಲ ಕಬ್ಬು ಬೆಳೆಗಾರರು ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಸೇರಬೇಕು ಎಂದು ಮನವಿ ಮಾಡಿದರು.
ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ಕಬ್ಬು ಬೆಳೆಯುವ ರೈತರು ಪ್ರತಿ ವರ್ಷ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳಿಂದ ಸರಿಯಾದ ಸಮಯಕ್ಕೆ ಬಿಲ್ ಪಾವತಿ ಮಾಡುತ್ತಿಲ್ಲ. ಸರ್ಕಾರದಿಂದ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡುತ್ತಿಲ್ಲ. ಇಂತಹ ಹಲವು ಸಮಸ್ಯೆಗಳಿಂದ ರೈತರು ಬಳಲುತ್ತಿದ್ದು, ಈ ವರ್ಷ ಕೂಡ ಹೋರಾಟ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಇದೇ 15ರೊಳಗೆ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯ ಸಕ್ಕರೆ ಕಾರ್ಖಾನೆಗಳ ಮಾಲಿಕರ ಮತ್ತು ಕಲಬುರ್ಗಿ ಜಿಲ್ಲೆಯ ಕಬ್ಬು ಬೆಳೆಗಾರರ ಸಂಘದ ಮುಖಂಡರ ಸಭೆಯನ್ನು ಜಿಲ್ಲಾಧಿಕಾರಿಗಳು ಕರೆಯಬೇಕು ಎಂದು ಕೋರಲಾಗಿತ್ತು. ಆದಾಗ್ಯೂ, ಜಿಲ್ಲಾಧಿಕಾರಿಗಳು ಸಭೆ ಕರೆದಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿ ಟನ್ ಕಬ್ಬಿಗೆ 2,800ರೂ.ಗಳ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದ ಅವರು, ಕೂಡಲೇ ಜಿಲ್ಲಾಧಿಕಾರಿಗಳು ಸಭೆ ಕರೆಯಬೇಕು. ಇಲ್ಲದೇ ಹೋದಲ್ಲಿ ನವೆಂಬರ್ 17ರಂದು ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಜಿಲ್ಲೆಯ ಆಳಂದ್ ತಾಲ್ಲೂಕಿನ ಭೂಸನೂರು ಗ್ರಾಮದ ಬಳಿ ಇರುವ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ, ಅಫಜಲಪುರ ತಾಲ್ಲೂಕಿನ ಮಳ್ಳಿ ಗ್ರಾಮದ ಬಳಿ ಇರುವ ರೇಣುಕಾ ಸಕ್ಕರೆ ಕಾರ್ಖಾನೆ ಮತ್ತು ಯಾದಗಿರಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2800ರೂ.ಗಳ ಬೆಲೆ ಘೋಷಣೆ ಮಾಡಬೇಕೆಂಬ ಆಗ್ರಹ ಮೊದಲಿನಿಂದಲೂ ಇದೆ. ಇನ್ನು ಕಬ್ಬು ಬೆಳೆಗಾರರ ಸಂಘವು ಟನ್ ಕಬ್ಬಿಗೆ 2800ರೂ.ಗಳ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿದೆ ಎಂದು ಅವರು ತಿಳಿಸಿದರು.
ಇನ್ನೊಂದೆಡೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಪ್ರತ್ಯೇಕವಾಗಿ ಮಾಧ್ಯಮವೊಂದಕ್ಕೆ ಮಾತನಾಡಿ, ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಪರಿಸ್ಥಿತಿ ತೀರಾ ಹೀನಾಯ ಪರಿಸ್ಥಿತಿಯಲ್ಲಿದ್ದು, ಡಾ. ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ಟನ್ ಕಬ್ಬಿಗೆ 3,500ರೂ.ಗಳ ದರ ನಿಗದಿ ಮಾಡುವಂತೆ ಮತ್ತು ಸರಿಯಾದ ಸಮಯದಲ್ಲಿ ರೈತರಿಂದ ಕಬ್ಬು ಖರೀದಿಸಬೇಕು ಎಂದು ಒತ್ತಾಯಿಸಿದರು.