ಜಿಲ್ಲಾಧಿಕಾರಿಗಳ ಆದೇಶದ ನಡುವೆಯೂ ಅಗತ್ಯ ವಸ್ತುಗಳ ಸಾಲಿಗೆ ಸೇರದ ಅಂಗಡಿಗಳು

ತಿ.ನರಸೀಪುರ. ಜೂ.09: ಪಟ್ಟಣದಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಲಾಗಿದ್ದು ಜಿಲ್ಲಾಡಳಿತ ಹೊರಡಿಸಿದ್ದ ಆದೇಶವನ್ನು ಗಾಳಿಗೆ ತೂರಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಇಳಿಮುಖ ಗೊಳ್ಳದ ಹಿನ್ನೆಲೆಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಜೂ.07 ರವರೆಗೆ ಸಂಪೂರ್ಣ ಲಾಕ್ ಡೌನ್ ಗೆ ಆದೇಶ ಹೊರಡಿಸಿ ಸೋಮವಾರ ಮತ್ತು ಗುರುವಾರ ಮಾತ್ರವೇ ಅಗತ್ಯ ವಸ್ತುಗಳ ಖರೀದಿಗೆ ಆದೇಶ ಹೊರಡಿಸಿದ್ದರು.ಅದರಂತೆ ಪಟ್ಟಣ ಸಂಪೂರ್ಣ ಲಾಕ್ ಡೌನ್ ಆಗಿ, ಪಟ್ಟಣ ಸಂಪೂರ್ಣವಾಗಿ ಸ್ಥಬ್ಧಗೊಂಡಿತ್ತು.
ಆದರೆ ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‍ರವರು ಇಂದಿನಿಂದ ಮತ್ತೆ ಹೊಸ ಮಾರ್ಗಸೂಚಿ ಹೊರಡಿಸಿದ್ದು ಅದರಂತೆ ಅಗತ್ಯ ವಸ್ತುಗಳ ಖರೀದಿಯನ್ನು ಪ್ರತಿದಿನ ಬೆಳಿಗ್ಗೆ 6 ರಿಂದ 10 ಗಂಟೆಯ ವರೆಗೆ ನಿಗದಿಪಡಿಸಿದ್ದರು.
ಜಿಲ್ಲಾಧಿಕಾರಿ ಗಳ ಆದೇಶವನ್ನು ಅನುಷ್ಠಾನ ಗೊಳಿಸುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದ್ದು ಅಗತ್ಯ ವಸ್ತುಗಳಲ್ಲದ ಅಂಗಡಿಗಳು ಸಹ ನಿಯಮ ಉಲ್ಲಂಘಿಸಿ ಅಂಗಡಿ ತೆರೆದು ರಾಜಾರೋಷವಾಗಿ ವ್ಯಾಪಾರದಲ್ಲಿ ತೊಡಗಿಕೊಂಡ ದೃಶ್ಯ ಕಂಡು ಬಂತು. ಪಟ್ಟಣದಲ್ಲಿ ಲಾಕ್ ಡೌನ್ ಜಾರಿಯಾದಾಗಿನಿಂದ ಇಲ್ಲಿಯವರೆಗೂ ಜಿಲ್ಲಾಡಳಿತದ ಆದೇಶ ಪಾಲನೆಯಾಗುತ್ತಿಲ್ಲ.
ಪಟ್ಟಣದಲ್ಲಿ ಲಾಕ್ ಡೌನ್ ಆದೇಶ ಜಾರಿಯಾಗಿಲ್ಲವೇನೋ ಅನ್ನುವ ಮಟ್ಟಿಗೆ ಅಗತ್ಯ ವಸ್ತುಗಳಲ್ಲದ ಅಂಗಡಿಗಳಾದ ಬೇಕರಿ, ಹಾರ್ಡ್‍ವೇರ್, ಎಲೆಕ್ಟ್ರಿಕಲ್, ಟೀ ಅಂಗಡಿ, ಸ್ಟೇಷನರಿ ಅಂಗಡಿಗಳು ಸೇರಿದಂತೆ ಎಲ್ಲ ಅಂಗಡಿಗಳವರು ಅಂಗಡಿಗಳನ್ನು ತೆರೆದು ವ್ಯಾಪಾರದಲ್ಲಿ ನಿರತರಾಗಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ತಾಲೂಕು ಆಡಳಿತ ಕಂಡು ಕಾಣದಂತೆ ವರ್ತಿಸುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಜಿಲ್ಲಾಧಿಕಾರಿಗಳು ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ಎಂದು ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿದ್ದರೂ ತಾಲೂಕಿನ ಅಧಿಕಾರಿ ವರ್ಗ ಇದನ್ನು ಅನುಷ್ಠಾನಗೊಳಿಸುವ ಗೋಜಿಗೆ ಹೋಗದಿರುವುದು ಮಾತ್ರ ವಿಪರ್ಯಾಸ. ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಜನರು ಪ್ರಮುಖ ರಸ್ತೆಗಳಲ್ಲಿ ಜಾತ್ರೆ ಯಂತೆ ಸೇರುತ್ತಿದ್ದು,ಮಾಸ್ಕ್ ಸಾಮಾಜಿಕ ಅಂತರ ಪಾಲನೆ ಮಾಡದೇ ಖರೀದಿಯಲ್ಲಿ ನಿರತರಾಗಿರುವುದು ಕಂಡು ಬಂದಿದೆ.
ಕೇವಲ ಅಗತ್ಯ ವಸ್ತುಗಳಿಗೆ ಮಾತ್ರ ವ್ಯಾಪಾರಕ್ಕೆಅವಕಾಶ ಇದೆ ಎಂದು ಪಟ್ಟಣದ ವರ್ತಕರಿಗೆ ಅರಿವು ಮೂಡಿಸಲು ತಾಲೂಕು ಆಡಳಿತ ಸಹ ವಿಫಲವಾಗಿತ್ತು. ಇದರಿಂದಾಗಿಯೇ ತಮಗೂ ಮಾರಾಟ ಮಾಡಲು ಅವಕಾಶ ಇದೆ ಎಂದು ಎಲ್ಲ ವ್ಯಾಪಾರಸ್ಥರು ಅಂಗಡಿ ತೆರೆದಿದ್ದರು.
ಕೆಲವೆಡೆ ಪೆÇೀಲೀಸರು ಅಗತ್ಯ ವಸ್ತುಗಳ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸುತ್ತಿದ್ದರಾದರೂ ತೆರೆದ ಅನಗತ್ಯ ಅಂಗಡಿಗಳನ್ನು ಮುಚ್ಚಿಸುವ ಗೋಜಿಗೆ ಹೋಗಲಿಲ್ಲ. ಒಟ್ಟಾರೆ ತಾಲೂಕಿನಲ್ಲಿ ಕೊರೊನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಸಮಯದಲ್ಲಿ ಅದರ ಹತೋಟಿಗೆ ಶ್ರಮಿಸಬೇಕಾದ ತಾಲೂಕು ಆಡಳಿತ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಮಾತ್ರ ವಿಪರ್ಯಾಸ. ಪಟ್ಟಣದಲ್ಲಿ ಸಡಿಲಿಕೆಯಾದ ಲಾಕ್ ಡೌನ್ ಕೋವಿಡ್ ನಿಯಮ ಉಲ್ಲಂಘನೆಗೆ ಸಾಕ್ಷಿಯಾಯಿತು. ಅಲ್ಲದೇ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗೆ ಸಾಕ್ಷಿಯಾಯಿತು.