ಜಿಲ್ಲಾಧಿಕಾರಿಗಳ ಅಂಗರಕ್ಷಕ, ಚಾಲಕರಿಂದ ಮತದಾನ

ಬೀದರ :ಎ.19: ಬಸವಕಲ್ಯಾಣ ಉಪ ಚುನಾವಣೆ ಮತದಾನ ದಿನವಾದ ಶನಿವಾರ ತಮ್ಮ ಅಂಗರಕ್ಷಕ ಮತ್ತು ವಾಹನ ಚಾಲಕನು ತಮ್ಮ ಹಕ್ಕು ಚಲಾಯಿಸಲು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಸಹಕರಿಸಿ ಗಮನ ಸೆಳೆದರು.

ಅಂಗರಕ್ಷಕ ಹನುಮಂತ ರೆಡ್ಡಿ ಮತ ಚಲಾಯಿಸಬೇಕಾದ ಇಲ್ಲಾಳ ಗ್ರಾಮದ ಮತಗಟ್ಟೆ ಸಂಖ್ಯೆ 175ಕ್ಕೆ ಮತ್ತು ವಾಹನ ಚಾಲಕನು ಮತದಾನ ಚಾಯಿಸಬೇಕಾದ ಮುಚಳಂಬ ಗ್ರಾಮದ ಮತಗಟ್ಟೆ ಸಂಖ್ಯೆ 40ಗೆ ಜಿಲ್ಲಾ ಧಿಕಾರಿಗಳು ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಪರಿಶೀಲಿಸಿ, ತಮ್ಮ ಕರ್ತವ್ಯಪಾಲನೆ ಜತೆಗೆ ತಮ್ಮ ಇಬ್ಬರು ಸಿಬ್ಬಂದಿಗಳ ಮತದಾನಕ್ಕೆ ಅವಕಾಶ ಕಲ್ಪಿಸಿದರು.

ಅಭಿನಂದನೆ ತಿಳಿಸಿದ ಅಂಗರಕ್ಷಕ: ಇಲ್ಲಾಳ ಮತಗಟ್ಟೆಯಲ್ಲಿ ಮತದಾನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹನುಮಂತ ರೆಡ್ಡಿ, ಮತದಾನ ದಿನದಂದು ಜಿಲ್ಲಾಧಿಕಾರಿಗಳ ಅಂಗರಕ್ಷಕ ಸೇವೆಯ ಜತೆಗೆ ಮತದಾನ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಟ್ಟ ಜಿಲ್ಲಾಧಿಕಾರಿಗಳಿಗೆ ವಂದನೆಗಳು ಎಂದು ತಿಳಿಸಿದರು.
ಅಂಗರಕ್ಷಕ ಮತದಾನ ಮಾಡಿದ ಬಳಿಕ ಡಿಸಿ, ತಮ್ಮ ವಾಹನ ಚಾಲಕನಾದ ಪಾಪನಾಶ ಅವರನ್ನು ಇಲ್ಲಾಳದಿಂದ ಮುಚಳಂಬ ಗ್ರಾಮಕ್ಕೆ ಮತದಾನ ಮಾಡಲು ಕರೆದುಕೊಂಡು ಬಂದರು. ಪಾಪನಾಶ ಅವರು, ಮುಚಳಂಬ ಗ್ರಾಮದ ಸರ್ಕಾರಿ ಶಾಲೆ ಮತಗಟ್ಟೆ ಸಂಖ್ಯೆ 40ರಲ್ಲಿ ಮತದಾನ ಮಾಡಿ ಜಿಲ್ಲಾಧಿ ಕಾರಿಗಳಿಗೆ ಅಭಿನಂದಿಸಿದರು.