ಜಿಲ್ಲಾಧಿಕಾರಿಗಳಿಂದ ಮಳೆ ಹಾನಿ ಪ್ರದೇಶಕ್ಕೆ ಭೇಟಿ:ಅಂಗನವಾಡಿ ಕೇಂದ್ರಗಳ ದುರಸ್ತಿ ಕೈಗೊಳ್ಳುವಂತೆ ಸಿ.ಡಿ.ಪಿ.ಓ ಗೆ ಸೂಚನೆ

ಕಲಬುರಗಿ,ಜು.29: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಶನಿವಾರ ಅಫಜಲಪುರ ತಾಲೂಕಿನ ವಿವಿಧ ಮಳೆ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಮಳೆಯಿಂದಾದ ಹಾನಿ ಕುರಿತು ವೀಕ್ಷಿಸಿದರು.
ಮೊದಲು ಅಪಜಲಪೂರ ತಾಲೂಕಿನ ಚೌಡಾಪುರ ಗ್ರಾಮಕ್ಕೆ ತೆರಳಿದ‌ ಅವರು, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು. ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಮಳೆಯಿಂದ ಸೋರುತ್ತಿದ್ದನ್ನು ಕಂಡ ಅವರು, ತಕ್ಷಣ ಈ ಕಟ್ಟಡ ಸೇರಿದಂತೆ ತಾಲೂಕಿನಲ್ಲಿ ಅಗತ್ಯವಿದ್ದೆಡೆ ಅಂಗನವಾಡಿ ಕೇಂದ್ರಗಳನ್ನು ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸಿ.ಡಿ.ಪಿ.ಓ ಪ್ರೇಮಾ ಅವರಿಗೆ ಸೂಚಿಸಿದರು.

ಇನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು, ಶಾಲೆಯಲ್ಲಿ ವ್ಯವಸ್ಥಿತ ಶೌಚಾಲಯದ ವ್ಯವಸ್ಥೆಯನ್ನು ಮಾಡುವಂತೆ ತಾಲೂಕು ಪಂಚಾಯತ‌ ಇ.ಓ ಹಾಗೂ ಪಿ.ಡಿ.ಓ ಗೆ ಸೂಚಿಸಿದರು.

ಅಫಜಲಪೂರ ತಾಲೂಕಿನ ಇಂಚಗೇರಾ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿದ ಅವರು, ತಕ್ಷಣ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡುವಂತೆ ತಹಸೀಲ್ದಾರ ಸಂಜೀವಕುಮಾರ ದಾಸರ್ ಅವರಿಗೆ ನಿರ್ದೇಶನ‌ ನೀಡಿದರು. ಅಲ್ಲದೆ ಹಿಂಚಗೇರಾ ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ಒಳಚರಂಡಿ, ಇತ್ಯಾದಿ ಗ್ರಾಮದ ಮೂಲಸೌಕರ್ಯಗಳ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಸ್ಥಳದಲ್ಲಿದ್ದ ತಾ.ಪಂ. ಇ.ಓ ವಿಜಯ ಮಹಾಂತೇಶ ಅವರಿಗೆ ಸೂಚಿಸಿದರು.

ಅಫಜಲಪೂರ ತಾಲೂಕಿನ ಅತನೂರ ಗ್ರಾಮದ ನಾಡ ಕಛೇರಿಗೆ ಭೇಟಿ ಡಿ.ಸಿ. ಅವರು ಭೇಟಿ ನೀಡಿದರು. ಕಟ್ಟಡ ಹಳೇಯದಾಗಿದ್ದರಿಂದ ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಹಸೀಲ್ದಾರರಿಗೆ ಸೂಚಿಸಿದರು.

ಕೋಣೆ ಬದಲಾಯಿಸುವಂತೆ ಸೂಚನೆ:ಘತ್ತರಗಾ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಮಳೆಯಿಂದ ಶಾಲಾ ಕೋಣೆ ಮೇಲ್ಚಾವಣಿ ಸೋರಿಕೆ ಕಂಡು, ಕೂಡಲೆ ದುರಸ್ತಿಗೊಳಿಸುವಂತೆ ಸ್ಥಳದಲ್ಲಿದ್ದ ತಹಶೀಲ್ದಾರರಿಗೆ ಸೂಚಿಸಿದರು. ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಶಾಲಾ ಮಕ್ಕಳನ್ನು ಬೇರೆ ಕೋಣೆಯಲ್ಲಿ ಪಾಠ‌ ಬೋಧಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಅವರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ನಂತರ ಘತ್ತರಗಾ ಸೇತುವೆ ವೀಕ್ಷಣೆ ಮಾಡಿ ನೀರಿನ‌ ಒಳಹರಿವು ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕಲಬುರಗಿ‌ ಉಪ ವಿಭಾಗದ ಸಹಾಯಕ ಆಯುಕ್ತೆ ಮಮತಾ ಕುಮಾರಿ, ಗ್ರೇಡ್-2 ತಹಶೀಲ್ದಾರ ಶರಣಬಸಪ್ಪ, ಸಹಾಯಕ ಕೃಷಿ ನಿರ್ದೇಶಕ ಸಿದ್ದಣ್ಣ ಗಡಗಿಮನಿ ಸೇರಿದಂತೆ ಇತರೆ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.