ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.23: ನಗರ ಮತ್ತು ತೆಕ್ಕಲಕೋಟೆ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರೊದಗಿಸುವಲ್ಲಿ ಲೋಪ ವೆಸಗಿದರೆ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲಾಗುವುದು, ಆದ್ದರಿಂದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರೊದಗಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರ ತಿಳಿಸಿದರು.
ನಗರದ ಟ್ರೆಂಡ್ ಸಭಾಂಗಣದಲ್ಲಿ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ, ಸಿರುಗುಪ್ಪ ನಗರಸಭೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಸಿರುಗುಪ್ಪ ನಗರದಲ್ಲಿರುವ ಸ್ಲಂಗಳನ್ನು ಗುರುತಿಸಿ ಅಲ್ಲಿ ನೀರು ಪೂರೈಕೆ ಮಾಡುವ ಮೂಲಗಳನ್ನು ಸ್ವಚ್ಛಗೊಳಿಸಿ ಶುದ್ಧ ನೀರನ್ನು ಪೂರೈಕೆ ಮಾಡಬೇಕು, ಚಿತ್ರದುರ್ಗ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಅಶುದ್ಧ ನೀರು ಸೇವಿಸಿ ಅನೇಕರು ಸಾವನ್ನಪ್ಪಿದ ಘಟನೆ ನಡೆದಿದ್ದು, ನಮ್ಮ ಜಿಲ್ಲೆಯಲ್ಲಿ ಅಶುದ್ಧ ನೀರು ಸೇವಿಸಿ ಯಾರು ಸಾವನ್ನಪ್ಪಬಾರದು ಆದ್ದರಿಂದ ಶುದ್ಧ ನೀರೊದಗಿಸಲು ಅಧಿಕಾರಿಗಳು ಕೆಲಸ ಮಾಡಬೇಕೆಂದು ಸೂಚಿಸಿದರು.
ಕುಡಿಯುವ ನೀರಿನ ಯಾವುದೇ ಸಮಸ್ಯೆ ಇದ್ದರೆ ತಕ್ಷಣವೇ ತಿಳಿಸಬೇಕು, ನೀರು ಪೂರೈಕೆ ವಿಷಯದ ಬಗ್ಗೆ ನಿರ್ಲಕ್ಷö್ಯ ಸಹಿಸುವುದಿಲ್ಲ, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆಯೇ ಎಂದು ಪೌರಾಯುಕ್ತ ಜೀವನ್ ಕಟ್ಟಿಮನಿ ಅವರನ್ನು ಪ್ರಶ್ನೆ ಮಾಡಿದರು.
ನಮ್ಮ ನಗರದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವುದಿಲ್ಲ. ಎಲ್ಲಾ ವಾರ್ಡ್ಗಳಲ್ಲಿ ಮಿನಿ ವಾಟರ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದ್ದು, ಸಾರ್ವಜನಿಕರಿಗೆ ಬೋರ್‌ವೆಲ್ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ಬಳಕೆ ನೀರಿಗೆ ಯಾವುದೇ ತೊಂದರೆ ಇಲ್ಲವೆಂದು ಪೌರಾಯುಕ್ತರು ತಿಳಿಸಿದರು.
ಬೋರ್‌ವೆಲ್ ನೀರನ್ನು ಸಾರ್ವನಿಕರು ಕುಡಿಯುತ್ತಿದ್ದರೆ ಅಂತಹ ನೀರನ್ನು ಪರೀಕ್ಷೆಗೊಳಪಡಿಸಿ ಯೋಗ್ಯವಿದ್ದರೆ ಮಾತ್ರ ಕುಡಿಯಲು ತಿಳಿಸಿ ಇಲ್ಲದಿದ್ದರೆ ಅಂತಹ ಬೋರ್‌ವೆಲ್ ನೀರನ್ನು ಕುಡಿಯದಂತೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
ತೆರಿಗೆ ವಸೂಲಿಯು ತೃಪ್ತಿಕರವಾಗಿಲ್ಲ, ವಾಣಿಜ್ಯ ಮತ್ತು ವಸತಿ, ನೀರು ತೆರಿಗೆಯನ್ನು ವಸೂಲಿ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷö್ಯ ಎದ್ದು ಕಾಣುತ್ತಿದೆ, ತೆರಿಗೆ ವಸೂಲಿ ಮಾಡಲು ನಿರ್ಲಕ್ಷö್ಯ ತೋರಿಸಿದವರಿಗೆ ನೋಟೀಸ್ ನೀಡಲಾಗುವುದು, ಸಿರುಗುಪ್ಪದಲ್ಲಿ 4ಕೋಟಿ 74ಲಕ್ಷ ತೆರಿಗೆ ವಸೂಲಿಯಾಗಬೇಕು, ಆದರೆ ನೀವು ಮಾಡಿರುವುದು ಕೇವಲ 10ಲಕ್ಷ ಹೀಗೆ ವಸೂಲಿ ಮಾಡಿದರೆ 10ವರ್ಷ ಆದರೂ ಸಹ ನೀವು ತೆರಿಗೆ ವಸೂಲಿ ಮಾಡಲು ಸಾದ್ಯವಿಲ್ಲ, ತೆರಿಗೆ ವಸೂಲಿ ನೆಪದಲ್ಲಿ ಬಡವರಿಗೆ ತೊಂದರೆಯನ್ನು ಕೊಡಬೇಡಿ ಎಂದು ಜಿಲ್ಲಾಧಿಕಾರಿಗಳು ಕರ ವಸೂಲಿಗಾರರ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.
ತೆಕ್ಕಲಕೊಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಕರವಸೂಲಿಯಲ್ಲಿ ಅಧಿಕಾರಿಗಳ ನಿರ್ಲಕ್ಷಯ ಎದ್ದುಕಾಣುತ್ತಿದೆ, ಕರವಸೂಲಿಯಲ್ಲಿ ನಿರ್ಲಕ್ಷö್ಯ ತೋರಿಸಿದರೆ ಸಹಿಸುವುದಿಲ್ಲ, ನೀಡಿದ ಟಾರ್ಗೆಟ್ ಪ್ರಕಾರ ಕರವಸೂಲಿ ಮಾಡಬೇಕೆಂದು ತೆಕ್ಕಲಕೋಟೆ ಪ.ಪಂ.ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ನಗರ ಯೋಜನಾಧಿಕಾರಿ ರಾಘವೇಂದ್ರ, ಇ.ಇ. ಶ್ರೀಕಂಠಯ್ಯಸ್ವಾಮಿ, ಎ.ಇ.ಇ. ಅಬಿಷೇಕ್, ಪೌರಾಯುಕ್ತ ಜೀವನ್‌ಕಟ್ಟಿಮನಿ, ಮುಖ್ಯಾಧಿಕಾರಿ ಪರಶುರಾಮ ಮತ್ತು ಸಿಬ್ಬಂದಿ ಇದ್ದರು.