ಜಿಲ್ಲಾಧಿಕಾರಿಗಳಿಂದ ನಗರ ಸಂಚಾರಃ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆ

ವಿಜಯಪುರ, ಜು.31-ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಜುಲೈ 29ರಂದು ನಗರದ ವಿವಿಧೆಡೆ ಸಂಚರಿಸಿ ನಾನಾ ಇಲಾಖೆಗಳಿಂದ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಮೊದಲಿಗೆ ಕನಕದಾಸ ಬಡಾವಣೆಗೆ ತೆರಳಿ, ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ ರೂ. ವೆಚ್ಚದಲ್ಲಿನ ಮುಕ್ತಾಯ ಹಂತದಲ್ಲಿರುವ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಪರಿಶೀಲನೆ ನಡೆಸಿದರು.
ಬಳಿಕ ಜಿಲ್ಲಾಧಿಕಾರಿಗಳು, ನಗರ ಗ್ರಂಥಾಲಯ ಪ್ರಾಧಿಕಾರದ ನಿಧಿ ಮತ್ತು ಕೇಂದ್ರ ಸರ್ಕಾರದ ರಾಜಾರಾಮ ಮೋಹನ್‍ರಾಯ್ ಲೈಬ್ರರಿ ಫೌಂಡೇಶನ್ ಯೋಜನೆಯಡಿ ಅಂದಾಜು 1.60 ಕೋಟಿ ರೂ ವೆಚ್ಚದಲ್ಲಿ ನಗರದ ಗಾಂಧಿ ಚೌಕ್ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಜಿಲ್ಲಾ ನಗರ ಕೇಂದ್ರ ಗ್ರಂಥಾಲಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ನೂತನ ಗ್ರಂಥಾಲಯ ನಿರ್ಮಾಣ ಕಾಮಗಾರಿಗೆ ಈಗಾಗಲೇ 80 ಲಕ್ಷ ರೂ. ಬಿಡುಗಡೆಯಾಗಿ ಕಾಮಗಾರಿ ನಡೆಯುತ್ತಿದೆ. ಇನ್ನುಳಿದ ಅನುದಾನ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕರಾದ ಅಜಯ್‍ಕುಮಾರ ಡಿ. ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಡಿಜಿಟಲ್ ಮಾದರಿಯಲ್ಲಿ ಗ್ರಂಥಾಲಯಕ್ಕೆ ಅವಶ್ಯಕವಾಗಿ ಬೇಕಾಗುವ ಪೀಠೋಕರಣ ಸೇರಿದಂತೆ ಇನ್ನೀತರ ಸಾಮಗ್ರಿಗಳಿಗೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಬಬಲೇಶ್ವರ ನಾಕಾ ಹತ್ತಿರದಲ್ಲಿ, ಅಂದಾಜು 356 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡು ಮುಕ್ತಾಯದ ಹಂತದಲ್ಲಿರುವ, 45 ಮಳಿಗೆಗಳನ್ನು ಹೊಂದಿರುವ ಸರ್ದಾರ ವಲ್ಲಭಬಾಯ್ ಪಟೇಲ್ ವಾಣಿಜ್ಯ ಸಂಕೀರ್ಣದ ಕಾಮಗಾರಿಯನ್ನು ಸಹ ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಬಳಿಕ ಬೂತನಾಳ ಕೆರೆಯ ಹತ್ತಿರ ಇರುವ ಸೈಕ್ಲಿಂಗ್ ವೆಲೋಡ್ರಮ್ ಕಾಮಗಾರಿ ಸ್ಥಳಕ್ಕು ಸಹ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮೆಕ್ಕಳಕೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್.ಜಿ.ಲೋಣಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಹಕ ಅಭಿಯಂತರರಾದ ಸಿ.ಬಿ.ಚಿಕ್ಕಲಗಿ, ಸಹಾಯಕ ಕಾರ್ಯನಿರ್ವಹಕಾ ಅಭಿಯಂತರರಾದ ಆರ್.ಕೆ.ಮುಜುಮದಾರ ಹಾಗೂ ಇನ್ನೀತರರು ಇದ್ದರು.