ಜಿಲ್ಲಾಧಿಕಾರಿಗಳಿಂದ ಅನಾವೃಷ್ಠಿಯಿಂದ ಹಾಳಾದ ಬೆಳೆ ಹಾನಿ ವೀಕ್ಷಣೆ:ಜಂಟಿ ಸಮೀಕ್ಷೆ ತ್ವರಿತವಾಗಿ ಮುಗಿಸಲು ಸೂಚನೆ

ಕಲಬುರಗಿ,ಸೆ.24: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಶನಿವಾರ ಕಾಳಗಿ ತಾಲ್ಲೂಕಿನ ವಚ್ಚಾ ಹಾಗೂ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಗ್ರಾಮಗಳಿಗೆ ಭೇಟಿ ನೀಡಿ ಮುಂಗಾರು ಮಳೆ ವೈಫಲ್ಯದ ಅನಾವೃಷ್ಠಿಯಿಂದ ಹಾಳಾದ ಬೆಳೆ ಹಾನಿ ಕ್ಷೇತ್ರವನ್ನು ಪರಿಶೀಲಿಸಿದರು.

ಪ್ರಸಕ್ರ 2023-24ನೇ ಸಾಲಿನಲ್ಲಿ ಮುಂಗಾರು ಮಳೆ ಕೈಕೊಟ್ಟಿದರಿಂದ ಅನಾವೃಷ್ಟಿಗೆ ತುತ್ತಾದ ಜಿಲ್ಲೆಯ 11 ತಾಲ್ಲೂಕುಗಳನ್ನು ರಾಜ್ಯ ಸರ್ಕಾರ “ಬರಗಾಲ ಪ್ರದೇಶ” ವೆಂದು ಘೋಷಣೆ ಮಾಡಿದೆ. ರೈತರಿಗೆ ಪರಿಹಾರ ನೀಡಬೇಕಾಗಿರುವುದರಿಂದ ಬೆಳೆ ಹಾನಿ ಜಂಟಿ ಸಮೀಕ್ಷೆ ಬೇಗ ಮುಕ್ತಾಯಗೂಳಿಸುವಂತೆ ಡಿ.ಸಿ. ಕೃಷಿ, ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು. ಬೆಳೆ ಸಮೀಕ್ಷೆ ಆಧಾರದ ಮೇಲೆ ಬೆಳೆ ಹಾನಿ ಅಂದಾಜಿಸಿ ನೇರ ನಗದು ವರ್ಗಾವಣೆ ಮುಖಾಂತರ ರೈತರ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಡಿ.ಸಿ. ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಚಿಂಚೋಳಿ ತಹಶೀಲ್ದಾರ ಸುಬ್ಬಣ್ಣ‌ ಜಮಖಂಡಿ,‌ ಕಾಳಗಿ ತಹಶೀಲ್ದಾರ ಗಮ್ಮಾವತಿ, ಸೇರಿದಂತೆ ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಹಾಜರಿದ್ದರು.

ಉದ್ದು, ಸೊಯಾಬೀನ್ ಹಾನಿ,ದೂರು ದಾಖಲಿಸಿ:ಪ್ರಸಕ್ತ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉದ್ದು ಹಾಗೂ ಸೋಯಾಬೀನ್‌ ಬೆಳೆದು ಕೃಷಿ ಮಿಮೆ ಮಾಡಿಸಿದ ರೈತರು ಕೊಯಿಲೋತ್ತರ ಬೆಳೆ ಹಾನಿಯಾದಲ್ಲಿ ಯುನಿವರ್ಸಲ್‌ ಜನರಲ್‌ ಇನ್ಸುರೆನ್ಸ ಕಂಪನಿಯ ಟೋಲ್ ಪ್ರೀ ಸಂಖ್ಯೆ. 1800-200-5142 ಗೆ ರೈತರು ಕರೆ ಮಾಡಿ ದೂರು ನೀಡಬೇಕೆಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ರೈತ ಭಾಂದವರಲ್ಲಿ ಮನವಿ ಮಾಡಿದ್ದಾರೆ.