ಜಿಲ್ಲಾಡಳಿತ ಸಾರ್ವಜನಿಕರಿಗೆ ಧೈರ್ಯ ತುಂಬಲಿ

ದಾವಣಗೆರೆ.ಮೇ.೫; ಜಿಲ್ಲಾಡಳಿತ, ಜನಪ್ರತಿನಿಧಿಗಳು ಮತ್ತು ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ.ಎಲ್.ಹರೀಶ್ ಬಸಾಪುರ ಹೇಳಿದ್ದಾರೆ.ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಹೆದರಬೇಡಿ ನಾವಿದ್ದೇವೆ ಎನ್ನುವ ಧೈರ್ಯದ ಮಾತುಗಳನ್ನು ಹೇಳಿ ಆಸ್ಪತ್ರೆಗಳಿಗೆ ಸುತ್ತಿ ಸುತ್ತಿ ಬೆಡ್ ಇಲ್ಲ ಎಂದು ಭಯದಿಂದಲೇ ಸಾಯುತ್ತಿರುವ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಬೇಕಾಗಿದೆ. ನಿನ್ನೆ ರಾತ್ರಿ ಹಳೇಬಾತಿ ಗ್ರಾಮದ 47 ವರ್ಷದ ವೇದಮೂರ್ತಿ ಎಂಬ ರೋಗಿಯೂ ಮೂರ್ನಾಲ್ಕು ಆಸ್ಪತ್ರೆಗಳನ್ನು ಸುತ್ತಿ ಬೆಡ್ ಸಿಗಲಿಲ್ಲ ಎಂಬ ಭಯದಲ್ಲೇ ಲೋ ಬಿಪಿ ಯಾಗಿ ಅಸುನೀಗಿದರು, ಭಾರತ್ ಕಾಲೋನಿಯ 17 ವರ್ಷದ ಸಂಗೀತ ಎಂಬ ಯುವತಿಯು ಸಹ ನಿನ್ನೆ ಬೆಡ್ ಸಿಗದೆ ಅಸುನೀಗಿದರು.ಇಂತಹ ಉದಾಹರಣೆಗಳು ಜಿಲ್ಲೆಯಲ್ಲಿ ಬಹಳ ಇದ್ದು, ಜಿಲ್ಲಾಡಳಿತ ಜಿಲ್ಲೆಯಲ್ಲಿರುವ ಆಸ್ಪತ್ರೆಗಳ ಮಾಹಿತಿ ಪಡೆದು, ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ ಬಂದ ರೋಗಿಗಳಿಗೆ ಪ್ರಥಮ ಚಿಕಿತ್ಸೆ ಎನಾದರೂ ನೀಡಿ ಅವರಿಗೆ ದೈರ್ಯ ತುಂಬಬೇಕು ಎಂದು ಆದೇಶಿಸಬೇಕು. ಜಿಲ್ಲೆಯಲ್ಲಿ 2200 ಪಾಸಿಟಿವ್ ಕೇಸ್ ಇರುವುದಾಗಿ ಮಾಹಿತಿಯಿದ್ದು ಅಷ್ಟು ಬೆಡ್ ಜಿಲ್ಲೆಯಲ್ಲಿ ಇಲ್ಲವೇ?   ಇಲ್ಲದಿದ್ದರೆ ಹಾಸ್ಟೆಲ್ಗಳು, ಲಾಡ್ಜ್ ಗಳನ್ನು ವಶಕ್ಕೆ ಪಡೆದು ಅಲ್ಲಿ ತಾತ್ಕಾಲಿಕ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ರೋಗಿಗಳಿಗೆ ನೆರವಾಗ ಬೇಕಾಗಿ ವಿನಂತಿ.ಇಂದು ಸಾರ್ವಜನಿಕರು ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಇದ್ದು, ದಯಮಾಡಿ ಜಿಲ್ಲಾಡಳಿತ ಯಾವುದೇ ರೋಗಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗಲಿಲ್ಲ ಎಂಬುದೇ ಸಾಯಲು ಕಾರಣವಾಗದೆ ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಕೈಮುಗಿದು ಕೇಳಿಕೊಳ್ಳುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.