ಜಿಲ್ಲಾಡಳಿತ ಕೊರೊನಾ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದೆ : ಸಾ.ರಾ. ಗಂಭೀರ ಆರೋಪ

ಮೈಸೂರು. ಮೇ.31: ಮೈಸೂರು ಜಿಲ್ಲಾಡಳಿತ ಕೊರೊನಾ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದೆ ಎಂದು ಶಾಸಕ ಸಾ.ರಾ.ಮಹೇಶ್ ಗಂಭೀರವಾಗಿ ಆರೋಪಿಸಿದರು.
ಮೈಸೂರಿನ ತಮ್ಮ ಕಛೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು ಸಾವಿನ ಸಂಖ್ಯೆಯನ್ನು ನೋಡಿ ನನಗೆ ಆಘಾತವಾಯ್ತು. ಮೈಸೂರು ನಗರ ವ್ಯಾಪ್ತಿಯಲ್ಲಿ ಮೇ 1 ರಿಂದ ಮೇ 29ರವರೆಗೆ 969 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಆದರೆ ಜಿಲ್ಲಾಡಳಿತ ಕೇವಲ 238 ಜನರ ಲೆಕ್ಕ ಕೊಟ್ಟಿದೆ. 731 ಸಾವುಗಳ ಲೆಕ್ಕವನ್ನು ಜಿಲ್ಲಾಡಳಿತ ಕೊಟ್ಟಿಲ್ಲ ಎಂದ ಅವರು ಈ ಸಂಬಂಧ ದಾಖಲೆ ಬಿಡುಗಡೆ ಮಾಡಿದರು.
ಮೇ ಒಂದೇ ತಿಂಗಳಲ್ಲಿ 3 ಸಾವಿರ ಜನ ಮೈಸೂರು ಜಿಲ್ಲೆಯಲ್ಲಿ ಸತ್ತಿದ್ದಾರೆ. ಸರ್ಕಾರ, ಸಿಎಂ, ಮುಖ್ಯ ಕಾರ್ಯದರ್ಶಿಗೂ ಜಿಲ್ಲಾಡಳಿತದಿಂದ ಯಾಕೆ ತಪ್ಪು ಮಾಹಿತಿ ನೀಡಿದ್ದೀರಿ? ಸಮರ್ಪಕ ಮಾಹಿತಿ ನೀಡಿದ್ರೆ ಇನ್ನಷ್ಟು ಮುಂಜಾಗ್ರತೆ ಕೈಗೊಳ್ಳಲು ಸರ್ಕಾರ ಮುಂದಾಗುತ್ತಿತ್ತೋ ಏನೋ. ನಿಮಗೆ ತಾಯಿ ಹೃದಯವೇ ಇಲ್ಲವೇ. ಇದು ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲವೇ. ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಹೇಗೆ ಕೆಲಸ ಮಾಡಿದ್ರು ಅನ್ನೋ ಕಾರಣಕ್ಕೆ ಇವರು ಮೈಸೂರಿಗೆ ಸೂಕ್ತವಲ್ಲ ಅಂತ ನಾವು ಹೇಳಿದ್ದು. ಆರಂಭದಲ್ಲಿ ಮೈಸೂರು ಸಂಸದರು ಇವರನ್ನು ಸಮರ್ಥನೆ ಮಾಡುತ್ತಿದ್ದರು. ಈಗ ಜ್ಞಾನೋದಯವಾಗಿ ಅವರು ಧ್ವನಿ ಎತ್ತಿದ್ದಾರೆ. ಸತ್ತವರ ಮಾಹಿತಿ. ಮರೆಮಾಚಿದ್ದರ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ಕೊಡುತ್ತೇನೆ. ಸಿಎಂ ಹಾಗೂ ರಾಜ್ಯಪಾಲರು ಇಬ್ಬರಿಗೂ ಕಳುಹಿಸುತ್ತೇನೆ. ಸಾವಿನ ಸಂಖ್ಯೆ ಹೆಚ್ಚಿದ್ದತೂ ಸಾವು ಇಳಿಮುಖ ಆಗಿದೆ. ಕೊರೊನಾ ಕಂಟ್ರೋಲ್ ಗೆ ಬರ್ತಿದೆ ಅಂತ ಫೆÇೀಸ್ ಕೊಡ್ತಿದ್ದಾರೆ. ನಿಮ್ಮ ಈ ಅಪರಾಧಕ್ಕೆ ಏನು ಶಿಕ್ಷೆ ಕೊಡಬೇಕು. ನಾನು ದಾಖಲೆಗಳ ಸಮೇತ ಮಾಹಿತಿ ಬಹಿರಂಗಪಡಿಸಿದ್ದೇನೆ. ಮೋಸದ ಅಂಕಿ ಅಂಶಗಳಿಂದ ಇಡೀ ಸರ್ಕಾರ ಹಾಗೂ ವ್ಯವಸ್ಥೆಯನ್ನೇ ವಂಚಿಸಿದ್ದಾರೆ. ಸತ್ತವರಿಗೂ ದ್ರೋಹ ಮಾಡಿದ್ದಾರೆ ಎಂದು ಸಿ ರೋಹಿಣಿ ಸಿಂದೂರಿ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದ ಸರ್ಕಾರಕ್ಕೆ ಸುಳ್ಳು ಲೆಕ್ಕ ಹೋಗಿದೆ ಎಂದು ಗಂಭೀರವಾಗಿ ಆರೋಪಿಸಿದ ಅವರು ನಿನ್ನೆ ಕೆ.ಆರ್.ನಗರದಲ್ಲಿ ಸಾವು ಝೀರೋ ಅಂತ ಲೆಕ್ಕ ತೋರಿಸಿದ್ದಾರೆ. ಆದರೆ ನನ್ನ ಗಮನಕ್ಕೆ ಬಂದಂತೆ ಚಿಕ್ಕನಾಯಕನಹಳ್ಳಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಸಂಸ್ಕಾರ ಮಾಡಲಾಗಿದೆ. ಯಾಕೆ ಸಾವುಗಳನ್ನು ಮುಚ್ಚಿಡುತ್ತಿದ್ದೀರಿ? ಯಾಕೆ ಮುಖ್ಯಕಾರ್ಯದರ್ಶಿ, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಲೆಕ್ಕ ಕೊಡುತ್ತಿಲ್ಲ. ಯಾಕೆ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದ್ದೀರಿ? ನಿಮಗೆ ಮಾನವೀಯತೆ, ಮನುಷ್ಯತ್ಯ, ತಾಯಿ ಹೃದಯ ಇಲ್ವಾ? ಸರ್ಕಾರವನ್ನೂ ಯಾಕೆ ದಿಕ್ಕು ತಪ್ಪಿಸುತ್ತಿದ್ದೀರಿ? ಇದು ಸತ್ತ ಕುಟುಂಬಸ್ಥರ ಮಾನವ ಹಕ್ಕುಗಳ ಉಲ್ಲಂಘನೆ ಅಲ್ವಾ? ಸತ್ಯ ವರದಿ ಮಾಡಿದ್ದರೆ ಮುಖ್ಯಮಂತ್ರಿ, ಸಚಿವರು ಅಥವಾ ಯಾರಾದರೂ ಮೈಸೂರಿಗೆ ಏನು ಕೆಲಸ ಆಗಬೇಕು ಅದನ್ನು ಮಾಡುತ್ತಿದ್ದರು. ಈ ಎಲ್ಲ ದಾಖಲೆಗಳನ್ನೂ ನಾನು ಮಾನವ ಹಕ್ಕು ಆಯೋಗ, ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡುತ್ತೇನೆ ಎಂದರು.
ನಿಮ್ಮ ಮೋಸದ ಅಂಕಿ ಅಂಶಗಳ ಪ್ರಕಾರ ದೇಶದ ಕಾನೂನು, ಸಿಎಂ, ಉಸ್ತುವಾರಿಯನ್ನು, ಜನರನ್ನು ವಂಚಿಸಿರೋದು. ಸತ್ತ ಕುಟುಂಬಗಳಿಗೆ ಮಾಡಿರೋ ದ್ರೋಹದ ಇಳಿಕೆ. ಕೋವಿಡ್‍ನಿಂದ ಮೃತಪಟ್ಟವರ 969 ಮಂದಿಯ ದಾಖಲೆ ಇದೆ. ಪ್ರತಿಯೊಬ್ಬರ ದಾಖಲೆಯು ಇದೆ, ಇದು ಕೇವಲ ಮೈಸೂರು ವ್ಯಾಪ್ತಿ. ಇನ್ನು ಮೈಸೂರು ಜಿಲ್ಲೆಯಾದ್ಯಂತ ಮತ್ತೆಷ್ಟು ಜನ ಸತ್ತಿದ್ದಾರೋ. ಮೇ 2ರಂದು ಇಬ್ಬರ ಸಾವು ಎಂದು ತೋರಿಸಿದ್ದೀರಿ, ಹಾಗಿದ್ರೆ ಉಳಿದ 21 ಮಂದಿಯ ಸಾವು ಏನು? ಡೆತ್ ಸರ್ಟಿಫಿಕೇಟ್ ನಲ್ಲಿರೋ ಮಾಹಿತಿ ಸುಳ್ಳಾ? ಏನ್ ನಡೆಯುತ್ತಿದೆ ಮೈಸೂರಲ್ಲಿ. ಜನ ಪ್ಯಾನಿಕ್ ಆಗ್ತಾರಂತೆ ಸರ್ಕಾರಕ್ಕಾದ್ರು ಸರಿಯಾದ ಮಾಹಿತಿ ಕೊಡಬಹುದಿತ್ತು. ಆದ್ರೆ ಸರ್ಕಾರಕ್ಕು ಸರಿಯಾದ ಮಾಹಿತಿ ಇಲ್ಲ ಅಂದ್ರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆಯಲ್ಲಿ ಸಾವು ಇಳಿಸಿದ್ದೇನೆ. ಸಾಧನೆ ಮಾಡಿದ್ದೇನೆ ಅಂತಾ ಪೆÇೀಸು ಕೊಡಲು ಈ ರೀತಿ ಮಾಡಿದ್ದಾರೆ. ಸರ್ಕಾರ ಈಗಲಾದರೂ ಕಣ್ಣು ತೆರೆಯಲಿ. ರಾಜ್ಯಪಾಲರು ಇದನ್ನು ತನಿಖೆ ಮಾಡಿಸಬೇಕು. ಒಂದು ಸಾವಾದರೂ ಅದು ಸಾವೇ. ಜಿಲ್ಲೆಯಲ್ಲಿ ಅದೆಷ್ಟು ಜನ ಸಾವನ್ನಪ್ಪಿದ್ದಾರೋ ಗೊತ್ತಿಲ್ಲ. ಅದರ ಮಾಹಿತಿ ಸಹ ಕಲೆ ಹಾಕುತ್ತೇನೆ. ವೈದ್ಯರು ಸುಳ್ಳಾ? ಅಥವಾ ಅಂತ್ಯಕ್ರಿಯೆ ಮಾಡಿದ್ದು ಸುಳ್ಳಾ? ಜನರು ಭಯ ಬೀಳುತ್ತಾರೆ ಅಂತಾ ಮಾಧ್ಯಮಗಳಿಗೆ ಕಡಿಮೆ ಕೊಡಬಹುದೇನೋ. ಆದರೆ ಇವರು ಸರ್ಕಾರಕ್ಕೆ ಕಡಿಮೆ ಲೆಕ್ಕ ಕೊಟ್ಟಿದ್ದಾರೆ ಎಂದರು.