ಜಿಲ್ಲಾಡಳಿತವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ : ಜಿಲ್ಲಾಧಿಕಾರಿ ಸ್ನೇಹಲ್ ಆರ್

ಗುರುಮಠಕಲ್:ಜ.22: ತಾಲೂಕಿನ ಕಾಳೆಬೆಳಗುಂದಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮ

ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ

ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಗ್ರಾಮಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ನೀವು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು ನಿಮಗೆ ಈ ಕಾರ್ಯಕ್ರಮ ಒಂದು ಒಳ್ಳೆಯ ಅವಕಾಶ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ನುಡಿದರು.

ಗುರುಮಠಕಲ್ ತಾಲೂಕಿನ ಕಾಳೆಬೆಳಗುಂದಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮದ ಅಂಗವಾಗಿ ಮತ್ತು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ ನಿಮ್ಮಿತ್ತ ಪೂಜೆ ಸಲ್ಲಿಸಿ , ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ,ಗ್ರಾಮದ ಜನರ ಅಹವಾಲಗಳನ್ನು ಸ್ವೀಕರಿಸಿ, ಪಿಂಚಣಿ ಪತ್ರ, ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಯ ಸೌಲಭ್ಯ ಪತ್ರಗಳನ್ನು ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಹಣಿ ತಿದ್ದುಪಡಿ, ಮೋಜನಿ ಕಡತಗಳು,ಪಿಂಚಣಿ, ಆಶ್ರಯ ಯೋಜನೆ, ಫವತಿ ಖಾತೆ, ಮತದಾರರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹ ಪರಿಶೀಲನೆ ಹಾಗೂ ಪರಿಹಾರ ನೀಡುವುದು, ಅರ್ಹ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಹಂಚಿಕೆ, ಪೆÇೀಡಿ ಪ್ರಕರಣ ಇತ್ಯರ್ಥಕ್ಕೆ ಸಂಬಂಧಿಸಿದ ಅಡೆತಡೆ ನಿವಾರಣೆ ಸಂಬಂಧ ಅರ್ಜಿಗಳನ್ನು ಕೊಡಬಹುದು ಎಂದು ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ತಿಳಿಸಿದರು.

ಈ ಕಾರ್ಯಕ್ರಮಲ್ಲಿ ಕೇವಲ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರ ಮಾತ್ರವಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯತ ಅಭಿವೃದ್ಧಿ ಇಲಾಖೆ ಇನ್ನಿತರ ಯಾವುದೇ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದರೆ ಜಿಲ್ಲಾಡಳಿತ ಹಂತದಲ್ಲಿ ಇರುವ ಸಮಸ್ಯೆಗಳಿದ್ದರೆ ಪರಿಹರಿಸುತ್ತೇವೆ ಎಂದರು.

ಅದ್ದೂರಿ ಸ್ವಾಗತ;
ಕಾಳೆಬೆಳಗುಂದಿ ಗ್ರಾಮದಲ್ಲಿ ಹಳ್ಳಿ ಸೊಗಡಿನ ಬಾಜಿ ಭಜಂತ್ರಿ ವಾದ್ಯಗಳ ಮ್ಯೂಜಿಕ್ ಪೇಟಿಯ ಗಾಡಿಯೊಂದಿಗೆ ಅದ್ಧೂರಿ ಮೆರವಣಿಗೆಯೊಂದಿಗೆ ಊರಿನ ಬೀದಿಯಲ್ಲಿ ಮೆರವಣಿಗೆ ಮಾಡಿ, ಹೃದಯಸ್ಪರ್ಶಿ ಸ್ವಾಗತ ನೀಡಿ ಮಹಿಳೆಯರು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರಿಗೆ ಆರತಿ ಬೆಳಗಿ ಗ್ರಾಮದ ಸಂಪ್ರದಾಯ ಮೆರೆದರು.

ದೇವಸ್ಥಾನಕ್ಕೆ ಭೇಟಿ, ಆವರಣದಲ್ಲಿ ಸಸಿನೆಟ್ಟ ಜಿಲ್ಲಾಧಿಕಾರಿ;
ಕಾಳೆಬೆಳಗುಂದಿ ಗ್ರಾಮದ ಶ್ರೀ ಬನದೇಶ್ವರ ಮತ್ತು ಶ್ರೀ ಕಾಳಿಕಾದೇವಸ್ಥಾನಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ದರ್ಶನ ಪಡೆದರು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿ ಪ್ರಸಾದ ಸೇವಿಸಿದರು. ಆನಂತರ ಶ್ರೀ ಕಾಳಿಕದೇವಿ ದೇವಸ್ಥಾನದ ಆವರಣದಲ್ಲಿ ಸಸಿನೆಟ್ಟು ನೀರೆರೆದರು.

ಮೊರಾರ್ಜಿ ವಸತಿ ಶಾಲೆಗೆ ಭೇಟಿ ಪರಿಶೀಲನೆ;

ಕಾಳಬೆಳಗುಂದಿ ಗ್ರಾಮ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಶಿಕ್ಷಣದ ಗುಣಮಟ್ಟ ಪರಿಶೀಲಸಿ ಕುಂದುಕೊರತೆ ವಿಚಾರಿಸಿದರು. ಸಮಯ ವ್ಯರ್ಥ ಮಾಡದೆ ಉತ್ತಮವಾಗಿ ವ್ಯಾಸಂಗ ಮಾಡಬೇಕೆಂದು ಕಿವಿಮಾತು ಹೇಳಿದರು. ವಸತಿ ನಿಲಯದ ಊಟ ಉಪಹಾರ ವ್ಯವಸ್ಥೆಯನ್ನು ಪರಿಶೀಲಿಸಿ ನಂತರ ಮಕ್ಕಳೊಂದಿಗೆ ಸೇರಿ ಮಧ್ಯಾಹ್ನದ ಊಟ ಸವಿದರು. ಪ್ರತಿದಿನ ಗುಣಮಟ್ಟದ ಊಟ ನೀಡಿ ಶುಚಿತ್ವ ಕಾಪಾಡುವಂತೆ ಮೇಲ್ವಿಚಾರಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

77 ಕ್ಕೂ ಅಧಿಕ ಅರ್ಜಿಗಳ ಸ್ವೀಕಾರ;

ಕಾಳ ಬೆಳಗುಂದಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು 77 ಅಧಿಕ ಕುಂದುಕೊರತೆ ಅರ್ಜಿಗಳು ಸ್ವೀಕರಿಸಲಾಗಿದ್ದು. ಅದರಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 19 ಅರ್ಜಿಗಳಿವೆ. ಹಾಗೂ ಇತರೆ ಇಲಾಖೆಗಳಿಗೆ ಸೇರಿದ 58 ಅಧಿಕ ಅರ್ಜಿಗಳಿವೆ. ಸಂಬಂಧಿಸಿದ ಇಲಾಖೆಗಳಿಗೆ ಎಲ್ಲಾ ಅರ್ಜಿಗಳ ಕುರಿತು ಕ್ರಮ ಕೈಗೊಳ್ಳಲು ರವಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಶಾ ಆಲಂ ಹುಸೇನ್, ಗುರುಮಿಠಕಲ್ ತಹಶೀಲ್ದಾರ ಶರಣಬಸವ, ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ ಬಸಂಪೂರ, ಪಿಡಿಓ ಭೀಮರಾಯ ಮಡಗೊರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚನ್ನಬಸವ ಎಸ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಭುದೊರೆ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ರಾಘವೇಂದ್ರ, ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರೀ ಕೋಳಿ, ಸಾರಿಗೆ ವಿಭಾಗೀಯ ಅಧಿಕಾರಿ ರಮೇಶ ಪಾಟೀಲ್, ಯಾದಗಿರಿ ತಾಲೂಕು ವೈದ್ಯಾಧಿಕಾರಿ ಡಾ. ಹಣಮಂತರೆಡ್ಡಿ, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.