ಜಿಲ್ಲಾಡಳಿತದಿಂದ ಡಿಸೆಂಬರ್‍ನಲ್ಲಿ ಮತ್ತೊಂದು ವಿನೂತನ ಕಾರ್ಯಕ್ರಮ

ಬೀದರ ನ. 04: ವಿವಿಧ ನಾಗರಿಕ ಸೇವೆಗಳ ಪರೀಕ್ಷೆಗಳ ಕುರಿತಾಗಿ ಬೀದರ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇತ್ತೀಚಿಗಷ್ಟೇ ರೂಪಿಸಿದ ಮಾದರಿಯಲ್ಲಿಯೇ ಜಿಲ್ಲಾಡಳಿತವು ಮುಂಬರುವ ಡಿಸೆಂಬರ್‍ನಲ್ಲಿ ಮತ್ತೊಂದು ವಿನೂತನ ‘ಸಶಸ್ತ್ರ ಪಡೆಗಳ ಸೇರಲು ಅರಿವು ಕಾರ್ಯಕ್ರಮ’ (ಚಿಡಿmeಜ ಜಿoಡಿಛಿe oಡಿieಟಿಣಚಿಣioಟಿ ಠಿಡಿogಡಿಚಿmme) ರೂಪಿಸಲು ಯೋಜಿಸಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 3ರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಬೀದರನ ಗ್ಲೋಬಲ್ ಸೈನಿಕ ಅಕಾಡೆಮಿ ಸ್ಕೂಲ್‍ನ ಮುಖ್ಯಸ್ಥರು ಮತ್ತು ರೋಟರಿ ಕ್ಲಬ್ ಆಫ್ ಬೀದರ ನ್ಯೂ ಸಂಚ್ಯೂರಿ ಬೀದರನ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಕಾರ್ಯಕ್ರಮದ ರೂಪುರೇಷಗಳ ಬಗ್ಗೆ ಸಮಗ್ರ ಚರ್ಚಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ವಿಜಯಪುರ ಮತ್ತು ಕೊಡಗು ಜಿಲ್ಲೆಗಳಲ್ಲಿ ಬಹಳಷ್ಟು ಜನರು ಆರ್ಮಿ ಮತ್ತು ಏರ್‍ಪೋರ್ಸಗೆ ಸೇರಿ ಕೆಲಸ ಮಾಡುತ್ತಿದ್ದಾರೆ. ಬೀದರ ಜಿಲ್ಲೆಯಲ್ಲಿ ಇಡೀ ದೇಶವೇ ಗಮನ ಸೆಳೆಯುವಂತಹ ವಾಯುನೆಲೆ ಇದ್ದರೂ ಬೀದರ ಜಿಲ್ಲೆಯ ಜನರು ಆರ್ಮಿ ಮತ್ತು ಏರಪೋರ್ಸ್ ಸೇರಲು ಮನಸು ಮಾಡುವುದಿಲ್ಲ. ಡಾಕ್ಟರ್, ಎಂಜಿನಿಯರ್ ಆಗಲು ಬಯಸುತ್ತಾರೆ ವಿನಃ ದೇಶಸೇವೆಯಲ್ಲಿ ತೊಡಗುವಂತಹ ಆರ್ಮಿ ಮತ್ತು ಏರ್‍ಪೋರ್ಸ್ ಸೇರಲು ಇಚ್ಚಿಸುವುದಿಲ್ಲ. ಹೀಗಾಗಿ ಈ ಭಾಗದ ವಿದ್ಯಾರ್ಥಿಗಳು ಕೂಡ ಆರ್ಮಿ, ನೇವಿ, ಪ್ಯಾರಾಮಿಲಿಟರಿ ಪೋರ್ಸ್ ಸೇರಬೇಕು ಎಂದು ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಪ್ರೇರಣೆ ಮೂಡಿಸಲು ಮತ್ತು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಉತ್ತೀರ್ಣರಾಗಿದ್ದರೆ ಸಾಕು ನೇರವಾಗಿ ಆರ್ಮಿ, ನೇವಿ, ಪ್ಯಾರಾಮಿಲಿಟರಿ ಪೋರ್ಸ್ ಸೇರಲು ಅವಕಾಶವಿದೆ ಎಂದು ತಿಳಿಸಲು ಈ ‘ಸಶಸ್ತ್ರ ಪಡೆಗಳ ಸೇರಲು ಅರಿವು ಕಾರ್ಯಕ್ರಮ’ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಎಸ್ಪಿ ಮತ್ತು ಸಿಇಓ ಅವರಿಂದ ಸಲಹೆ:ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಲಹೆಯನ್ನು ಕೂಡ ಪಡೆಯಲಾಗುವುದು. ಸಶಸ್ತ್ರ ಪಡೆಗಳ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಅರಿವು ಮೂಡಿಸಲಾಗುವುದು. ಜಿಲ್ಲಾ ರಂಗಮಂದಿರವನ್ನು ಕಾಯ್ದಿರಿಸಿ ಕಾರ್ಯಕ್ರಮ ರೂಪಿಸಲು ಅವಕಾಶವಿದೆ ಎಂದು ತಿಳಿಸಿದರು.
ಯಾವುದೇ ರಂಗದಲ್ಲಾಗಲಿ ಸಾಧನೆ ಮಾಡಲು ಆ ರಂಗದ ಬಗ್ಗೆ ತಿಳಿವಳಿಕೆ ಮತ್ತು ಕೌಶಲ ಬಹುಮುಖ್ಯ. ಸರಿಯಾದ ಮಾರ್ಗದರ್ಶನ ಸಿಕ್ಕಲ್ಲಿ ಯಾವುದೇ ಕ್ಷೇತ್ರದಲ್ಲಿ ಯಶಸಾಧಿಸಬಹುದು. ಈ ಹಿನ್ನೆಲೆಯಲ್ಲಿ ಸಶಸ್ತ್ರ ಪಡೆ ಸೇರಲು ಅನುಕೂಲವಾಗುವಂತೆ ಅರಿವು ಮೂಡಿಸಲು ಡಿಸೆಂಬರ್‍ನಲ್ಲಿ ಅರಿವು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಇದಕ್ಕೆ ರೋಟರಿ ಕ್ಲಬ್ ಅಷ್ಟೇ ಅಲ್ಲ ಜಿಲ್ಲೆಯ ಸಾರ್ವಜನಿಕರ ಮತ್ತು ಇನ್ನೀತರ ಸಂಘ-ಸಂಸ್ಥೆಗಳ ಸಹಭಾಗಿತ್ವ ಅತೀ ಅವಶ್ಯವಿದೆ ಎಂದು ತಿಳಿಸಿದರು.
ಈ ವೇಳೆ ಗ್ಲೋಬಲ್ ಸೈನಿಕ ಅಕಾಡೆಮಿ ಸ್ಕೂಲ್‍ನ ಅಧ್ಯಕ್ಷರಾದ ಕರ್ಣಲ್ ಶರಣಪ್ಪ ಚಿಕೇನಪುರೆ ಅವರು ಮಾತನಾಡಿ, ನಾಗರಿಕ ಸೇವೆಗಳ ಪರೀಕ್ಷೆ ಕುರಿತಂತೆ ಜಿಲ್ಲಾಡಳಿತದಿಂದ ಇತ್ತೀಚೆಗೆ ನಡೆದ ಅರಿವು ಕಾರ್ಯಕ್ರಮವು ಪ್ರಯೋಜನಕಾರಿಯಾಗಿದೆ. ಬೀದರ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಮಿ, ನೇವಿ ಸೇರಬೇಕು ಎನ್ನುವ ದೂರದೃಷ್ಟಿ ತಮಗೂ ಇದೆ. ಹೀಗಾಗಿ ‘ಸಶಸ್ತ್ರ ಪಡೆಗಳ ಸೇರಲು ಅರಿವು ಕಾರ್ಯಕ್ರಮ’ ನಡೆಯಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಹೆಸರು ನೋಂದಣಿ, ಕಾರ್ಯಕ್ರಮ ಪ್ರಚಾರ, ವಿಷಯಗಳು, ಉಟೋಪಚಾರ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ರುದ್ರೇಶ ಗಾಳಿ, ರೋಟರಿ ಕ್ಲಬ್ ಆಫ್ ಬೀದರ ನ್ಯೂ ಸಂಚ್ಯೂರಿಯ ಅಧ್ಯಕ್ಷರಾದ ಸೂರ್ಯಕಾಂತ ರಾಮಶೆಟ್ಟಿ, ಕಾರ್ಯದರ್ಶಿ ಡಾ.ಕಪೀಲ್ ಪಾಟೀಲ, ಖಜಾಂಚಿ ಡಾ.ರಿತೇಶ್ ಸುಲೆಗಾಂವಕರ, ಸತೀಶ ಸ್ವಾಮಿ, ನಿತೀನ್ ಕರ್ಪೂರ., ಡಾ.ರಘು ಕೃಷ್ಣಮೂರ್ತಿ, ಚೇತನ ಮೇಗೂರ, ಶಿವಕುಮಾರ ಪಾಕಲ್ ಹಾಗೂ ಇತರರು ಇದ್ದರು.