ಜಿಲೆಟಿನ್ ಸ್ಫೋಟ 6 ಮಂದಿ ಸಾವು

ಬೆಂಗಳೂರು,ಫೆ.೨೩-ಶಿವಮೊಗ್ಗ ಹುಣಸೋಡು ಕ್ವಾರಿ ದುರಂತ ಜನರ ಮನದಿಂದ ಮಾಸುವ ಮುನ್ನವೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಲೆಟಿನ್ ಸ್ಫೋಟ ಸಂಭವಿಸಿ ಆರು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕು ಹಿರೇನಾಗವಲ್ಲಿ ಗ್ರಾಮದ ಬಳಿಯ ಭ್ರಮರವಾಸಿನಿ ಕ್ರಷರ್‌ನಿಂದ ಸರಿಸುಮಾರು ಒಂದೂವರೆ ಕಿಲೋಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ ನಿನ್ನೆ ಮಧ್ಯರಾತ್ರಿ ೧ ಗಂಟೆ ಈ ವೇಳೆ ಸ್ಫೋಟ ಸಂಭವಿಸಿದೆ.
ಈ ಸ್ಫೋಟದ ತೀವ್ರತೆಗೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಾಯಳುವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಚಿಕಿತ್ಸೆ ಫಲ ನೀಡದೆ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಕ್ರಷರ್ ಇಂಜಿನಿಯರ್ ಉಮಾಕಾಂತ್, ಕಂಪ್ಯೂಟರ್ ಆಪರೇಟರ್ ಗಂಗಾಧರ್, ವೇಯರ್ ಮುರುಳಿ ಹಾಗೂ ವಾಚ್‌ಮೆನ್ ಮಹೇಶ್ ಸೇರಿದಂತೆ ಸ್ಥಳೀಯ ರಾಮು ಎಂಬಾತ ಮೃತಪಟ್ಟಿದ್ದಾರೆ. ಟಾಟಾ ಏಸ್ ಚಾಲಕ ರಿಯಾಜ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Chickaballapur blast 5 killed


ಮೃತರು ಟಾಟಾ ಏಸ್ ಹಾಗೂ ಒಂದು ಬೈಕ್ ಮೂಲಕ ಭ್ರಮರವಾಸಿನಿ ಕ್ರಷರ್‌ನಿಂದ ಒಂದು ಕಿಲೋಮೀಟರ್ ದೂರದ ಅರಣ್ಯ ಪ್ರದೇಶಕ್ಕೆ ತೆರಳಿ ಅಲ್ಲಿ ಅಕ್ರಮವಾಗಿ ಅಡಗಿಸಿಟ್ಟಿದ್ದ ಜಿಲೆಟಿನ್ ಹಾಗೂ ಎಲೆಕ್ಟ್ರಿಕ್ ಡಿಟೋನೇಟರ್ಸ್ ಹೊತ್ತು ತರಲು ಮುಂದಾಗಿದ್ದಾಗ ಸ್ಫೋಟ ಸಂಭವಿಸಿದೆ.
ಅಕ್ರಮವಾಗಿ ಅಡಗಿಸಿಟ್ಟಿದ್ದ ಜಿಲೆಟಿನ್ ಹಾಗೂ ಎಲೆಕ್ಟ್ರಿಕ್ ಡಿಟೋನೇಟರ್ಸ್ ಹೊತ್ತು ತರಲು ಬೈಕ್‌ನಲ್ಲಿ ಮುಂದೆ ಸಾಗಿದರೆ ಹಿಂದೆ ಟಾಟಾ ಏಸ್ ವಾಹನ ಸಾಗಿದೆ.
ಕೊನೆಗೆ ಅರಣ್ಯ ಪ್ರದೇಶದಲ್ಲಿ ಅಡಗಿಸಿದ್ದ ಸ್ಫೋಟಕಗಳನ್ನು ಹೊತ್ತು ತರುವ ವೇಳೆ ಏಕಾಏಕಿ ಸ್ಫೋಟ ಸಂಭವಿಸಿದ ಪರಿಣಾಮ ಐದು ಮಂದಿ ಮೃತಪಟ್ಟಿದ್ದಾರೆ. ಸ್ಫೋಟದ ರಭಸಕ್ಕೆ ಮೃತದೇಹಗಳೆಲ್ಲಾ ನೂರಾರು ಮೀಟರ್ ಛಿದ್ರ ಛಿದ್ರವಾಗಿ ಚೆಲ್ಲಾಪಿಲ್ಲಿಗಳಾಗಿವೆ.
ಭ್ರಮರವಾಸಿನಿ ಕ್ರಷರ್‌ನ ಮಾಲೀಕರು ಸ್ಥಳೀಯ ಬಿಜೆಪಿ ಮುಖಂಡ ನಾಗರಾಜು ಹಾಗೂ ಆಂಧ್ರಮೂಲದ ಶಿವಾರೆಡ್ಡಿ ಹಾಗೂ ರಾಘವೇಂದ್ರ ರೆಡ್ಡಿ ಎನ್ನುವುದು ಪೊಲೀಸ್ ತನಿಖೆಯಲ್ಲಿ ಕಂಡುಬಂದಿದೆ.


ಕಳೆದ ವಾರ ಈ ಕ್ರಷರ್ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಪೊಲೀಸರ ಕಣ್ತಪ್ಪಿಸಿ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕಗಳನ್ನು ಬಿಸಾಡಲು ಹೋದಾಗ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಡಿಸಿಆರ್ ಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ
ಚಿಕ್ಕಬಳ್ಳಾಪುರದ ಗುಡುಬಂಡೆ ತಾಲ್ಲೂಕಿನ ಹಿರೇನಾಗವೆಲಿಯ ಜಿಲೆಟಿನ್ ಸ್ಪೋಟ ಪ್ರಕರಣ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್‌ನಿರಾಣಿ ಹೇಳಿದ್ದಾರೆ.
ಈ ಘಟನೆ ಸಂಬಂಧ ಶಿವಮೊಗ್ಗದ ಗಣಿ ಸ್ಫೋಟದ ನಂತರ ಇಂತಹ ಘಟನೆ ನಡೆದಿರುವುದು ದುರಾದೃಷ್ಟಕರ. ಸರ್ಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಎಂದು ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.
ಈ ಘಟನೆ ದುರಾದೃಷ್ಟಕರ. ಈ ಸ್ಫೋಟ ಪ್ರಕರಣದಲ್ಲಿ ಐವರು ಸಾವನ್ನಪ್ಪಿರುವ ಸುದ್ದಿ ಕೇಳಿ ಆಘಾತವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಸಂತ್ರಸ್ಥ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ಅವರು ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.
ಈ ಸ್ಫೋಟ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಘಟನಾ ಸ್ಥಳಕ್ಕೆ ತೆರಳಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಮರುಕಳುಹಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೊಳಿಸುವುದಾಗಿ ಅವರು ಹೇಳಿದರು.

ಸ್ಫೋಟಕ ಸಾಗಿಸುವಾಗಿ ದುರ್ಘಟನೆ
ಚಿಕ್ಕಬಳ್ಳಾಪುರ ತಾಲೂಕಿನ ಹಿರೇನಾಗವೇಲಿ ಬಳಿ ನಿನ್ನೆ ಮಧ್ಯರಾತ್ರಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿರುವ ರಿಯಾಜ್ ಬಚ್ಚಿಟ್ಟಿದ್ದ ಸ್ಫೋಟಕ ಸಾಗಿಸಲು ತೆರಳಿದ್ದಾಗ ದುರ್ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ನನಗೆ ಮಧ್ಯ ರಾತ್ರಿ ೧೨ ಗಂಟೆಗೆ ಟಾಟಾ ಏಸ್ ಹತ್ತಲು ಹೇಳಿದರು. ಟಾಟಾ ಏಸ್‌ನಲ್ಲಿ ಏನಿತ್ತು ಎಂದು ನನಗೆ ಗೊತ್ತಿಲ್ಲ. ಬಾಕ್ಸ್, ಬ್ಯಾಗ್‌ಗಳನ್ನು ತೆಗೆದುಕೊಂಡು ಐವರು ಅರಣ್ಯದೊಳಗೆ ಹೋದರು.
ನಾನು ವಾಹನದಲ್ಲಿ ಕುಳಿತಿದ್ದಾಗ ದೂರದಲ್ಲಿ ಸ್ಫೋಟ ಸಂಭವಿಸಿತು. ಅರಣ್ಯದೊಳಗೆ ಹೋದ ಐವರು ಏನಾದರೋ ಗೊತ್ತಿಲ್ಲ. ನನಗೆ ಸಂಪೂರ್ಣ ಸುಟ್ಟ ಹಾಗೂ ರಕ್ತದ ಗಾಯಗಳಾಗಿವೆ ಎಂದಿದ್ದಾರೆ.

ಭೂಮಿ ಕಂಪಿಸಿದ ಅನುಭವ
ಜಿಲೆಟಿನ್ ಸ್ಫೋಟದಿಂದ ಚಿಕ್ಕಬಳ್ಳಾಪುರ ತಾಲೂಕಿನ ಹಿರೇನಾಗವಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿನ್ನೆ ಮಧ್ಯರಾತ್ರಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.
ಜಿಲೆಟಿನ್ ಸ್ಫೋಟದಿಂದ ಭೂಮಿ ಕಂಪಿಸಿದ ಅನುಭವ ಉಂಟಾಗಿ ಭೂಕಂಪ ಎಂದು ಭಾವಿಸಿ ಜನ ಮನೆಯಿಂದ ಹೊರ ಬಂದಿದ್ದಾರೆ.
ನಂತರ ಜಿಲೆಟಿನ್ ಸ್ಫೋಟ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹಿರೇನಾಗವೇಲಿ ಗ್ರಾಮಸ್ಥರು ಕ್ವಾರಿ ಸ್ಥಳಕ್ಕೆ ದೌಡಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಫೋಟದ ಸದ್ದಿಗೆ ಗ್ರಾಮಸ್ಥರು ರಾತ್ರಿಯಿಡೀ ನಿದ್ದೆಯಿಲ್ಲದೇ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಕಳೆದ ೨೦೦೮ರಿಂದಲೂ ಜಿಲೆಟಿನ್ ಸ್ಫೋಟದಿಂದ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆತಂಕದಿಂದಲೇ ನೋವು ತೋಡಿಕೊಂಡಿದ್ದಾರೆ.

ತನಿಖೆಗೆ ಸಿಎಂ ಆದೇಶ
ಚಿಕ್ಕಬಳ್ಳಾಪುರ ತಾಲ್ಲೂಕಿನ ಹಿರೇನಾಗವಲೆಯಲ್ಲಿ ನಡೆದಿರುವ ಜಿಲೆಟಿನ್ ಸ್ಪೋಟ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಈ ಸ್ಪೋಟ ಪ್ರಕರಣದಲ್ಲಿ ಆರು ಮಂದಿ ಸಾವನ್ನಪ್ಪಿರುವುದು ತೀವ್ರ ಆಘಾತ ತಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತಿದ್ದು, ಸಂಪೂರ್ಣ ತನಿಖೆ ನಡೆಸಿ ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಈ ದುರ್ಘಟನೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಟ್ವೀಟ್‌ನಲ್ಲಿ ಶಾಂತಿ ಕೋರಿರುವ ಯಡಿಯೂರಪ್ಪ ಅವರು ಮೃತ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.