ಜಿಮ್ ಸೆಂಟರ್ ಮಾಲೀಕನಿಗೆ ವಂಚನೆ: ಇಬ್ಬರ ವಿರುದ್ಧ 420 ಕೇಸ್

ಕಲಬುರಗಿ,ಜು.7-ಜಿಮ್ ಮಾಲೀಕನಿಗೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಇಲ್ಲಿನ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ 420 ಕೇಸ್ ದಾಖಲಾಗಿದೆ.
ಗುಬ್ಬಿ ಕಾಲೋನಿಯ ಕೃಷ್ಣಾ ಸಿ.ರಮೇಶ್ ಅವರು ಸೇಡಂ ರಸ್ತೆಯಲ್ಲಿ ಸ್ನ್ಯಾಪ್ ಫಿಟನೆಸ್ ಜಿಮ್ ಸೆಂಟರ್ ನಡೆಸುತ್ತಿದ್ದು, ಇಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ಎಂ.ಎಸ್.ಕೆ.ಮಿಲ್‍ನ ಸೈಯದ್ ಶಹಬಾಜ್ ಮತ್ತು ಮೋಹ್ಮದ್ದ ಅಬ್ದುಲ್ ಕಲೀಂ ಅವರು ಜಿಮ್‍ಗೆ ಬರುತ್ತಿದ್ದ ಗ್ರಾಹಕರಿಂದ ತಿಂಗಳ ಫೀಸ್ ಪಡೆದು ಅದನ್ನು ಕಂಪನಿ ಅಕೌಂಟ್‍ಗೆ ಜಮಾ ಮಾಡುತ್ತಿದ್ದರು. ಆದರೆ, ನವೆಂಬರ್ 2022 ರಿಂದ ಜೂನ್ 2023ರವರೆಗೆ ಕೆಲವು ಗ್ರಾಹಕರು ತಮ್ಮ ಫೀಸ್‍ನ್ನು ಸೈಯದ್ ಶಹಬಾಜ್ ಮತ್ತು ಮೋಹ್ಮದ್ ಅಬ್ದುಲ್ ಕಲೀಂ ಅವರಿಗೆ ಕೊಟ್ಟಿದ್ದಾರೆ. ಇವರು ಈ ಹಣವನ್ನು ವೈಯಕ್ತಿವಾಗಿ ಬಳಸಿಕೊಂಡಿದ್ದಲ್ಲದೆ ತಮ್ಮ ವೈಯಕ್ತಿಕ ಅಕೌಂಟ್‍ಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೃಷ್ಣಾ ಅವರು ಒಂದು ವಾರದ ಹಿಂದೆ ಅಕೌಂಟೆಂಟ್‍ಗಳಾದ ಶ್ಯಾಮ್ ಹತಕರ್ ಮತ್ತು ಆನಂದ ಅವರನ್ನು ವಿಚಾರಿಸಿ ಹಣಕಾಸಿನ ವ್ಯವಹಾರ ಪರಿಶೀಲಿಸಿದಾಗ ಸೈಯದ್ ಶಹಬಾಜ್ ಮತ್ತು ಮೋಹ್ಮದ್ ಅಬ್ದುಲ್ ಕಲೀಂ ಅವರು 10,49000 ರೂ.ನಗದು ಹಣ ಹಾಗೂ ಫೋನ್ ಪೇ ಮತ್ತು ಗೂಗಲ್ ಪೇ ಮೂಲಕ 2 ಲಕ್ಷ ರೂಪಾಯಿಯನ್ನು ತಮ್ಮ ವೈಯಕ್ತಿಕ ಖಾತೆಗೆ ಜಮೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇಬ್ಬರು ಸೇರಿ ಒಟ್ಟು 12,49,000 ರೂ. ತೆಗೆದುಕೊಂಡು ವಂಚನೆ ಮಾಡಿದ್ದಾರೆ ಎಂದು ಕೃಷ್ಣಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೈಯದ್ ಶಹಬಾಜ್ ಮತ್ತು ಮೋಹ್ಮದ್ ಅಬ್ದುಲ್ ಕಲೀಂ ವಿರುದ್ಧ ಎಂ.ಬಿ.ನಗರ ಪೊಲೀಸರು 420 ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.