ಜಿಮ್ಸ್ ಆಸ್ಪತ್ರೆ ಶುಶ್ರೂಷಾ ಅಧಿಕಾರಿಗಳ ಬೀಳ್ಕೊಡುಗೆ

ಕಲಬುರಗಿ ಆ 1: ಜಿಮ್ಸ್ ಆಸ್ಪತ್ರೆ ರಕ್ತ ನಿಧಿ ಕೇಂದ್ರದಲ್ಲಿ ಶುಶ್ರೂಷಾ ಹಿರಿಯ ಅಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಆದಿಲಿಂಗಯ್ಯ ಹಾಗೂ ತುರ್ತು ಚಿಕಿತ್ಸಾ ವಿಭಾಗದ ಶುಶ್ರೂಷಾ ಅಧಿಕಾರಿ ಮನುಬಾಯಿ ಎಂ ಮುಕ್ಕ ಅವರನ್ನು ವಯೋನಿವೃತ್ತಿ ಹೊಂದಿದ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಶಸ್ತ್ರಜ್ಞರಾದ ಡಾ.ಎ.ಎಸ್.ರುದ್ರವಾಡಿ ಅವರು ಮಾತನಾಡಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಇಬ್ಬರು ಮೂವರು ವಯೋನಿವೃತ್ತಿಯಿಂದ ಶುಶ್ರೂಷಾ ಅಧಿಕಾರಿಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತಿದೆ. ಇದರಿಂದ ಆಸ್ಪತ್ರೆಯ ರೋಗಿಗಳ ಸೇವೆಯಲ್ಲಿ ತೊಂದರೆಯಾದರೂ ಲಭ್ಯವಿರುವ ಶುಶ್ರೂಷಾ ಅಧಿಕಾರಿಗಳ ಹೊಂದಾಣಿಕೆ ಹಾಗೂ ಸೇವಾ ಭಾವನೆಯಿಂದ ಕೊರತೆ ಕಂಡುಬರುತ್ತಿಲ್ಲ ಎಂದರು. ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಲೆಂಗಟಿ ಅವರು ಮಾತನಾಡಿ ಇಡೀ ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ತಂದಿಟ್ಟ ಕೀರ್ತಿ ಶುಶ್ರೂಷಾ ಅಧಿಕಾರಿಗಳಿಗೆ ಸಲ್ಲುತ್ತದೆಎಂದರು.ನಿವೃತ್ತಿ ಹೊಂದುತ್ತಿರುವ ಆದಿಲಿಂಗಯ್ಯ ಅವರು ಮಾತನಾಡಿ ನನ್ನ ಸೇವಾ ಅವಧಿಯಲ್ಲಿ ಒಟ್ಟು 36 ಸಲ ರಕ್ತ ದಾನ ಮಾಡಿದ್ದೇನೆ. ತಾವೂ ಸಹ ರಕ್ತ ದಾನ ಮಾಡಿ ರೋಗಿಯ ಪ್ರಾಣ ಉಳಿಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು. ಬಿಎಸ್ಸಿ ನಸಿರ್ಂಗ್ ವಿದ್ಯಾರ್ಥಿ ಶಶಾಂಕ್ ಪ್ರಾರ್ಥನಾಗೀತೆ ಹಾಡಿದರು.ಆರೋಗ್ಯ ಮತ್ತು ಕು.ಕ.ಇಲಾಖಾ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಚಂದ್ರಕಾಂತ ಏರಿ, ಜೀಮ್ಸ್ ಆಸ್ಪತ್ರೆಯ ಸಹಾಯಕ ಆಡಳಿತ ಅಧಿಕಾರಿ ವೀರಣ್ಣ ಶಿವಪುರ, ಶುಶ್ರೂಷಾ ಅಧೀಕ್ಷಕರಾದ ಚಂಪಾಬಾಯಿ, ಮಹಾನಗರ ಪಾಲಿಕೆ ಸದಸ್ಯರಾದ ರಾಘಮ್ಮ ಇನಾಮದಾರ, ನಸಿರ್ಂಗ್ ಶಾಲೆಯ ಪ್ರಾಂಶುಪಾಲರಾದ ವಸಂತಮ್ಮ, ಸಂಘದ ಖಜಾಂಚಿ ಈರಮ್ಮ ಹೆಚ್ ಶಿಂಧೆ ಉಪಸ್ಥಿತರಿದ್ದರು. ರವೀಂದ್ರನಾಥ ನಿರೂಪಿಸಿದರು.ಆನಂದಕುಮಾರ್ ಧುಮ್ಮನಸೂರ್ ಸ್ವಾಗತಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾ ಅಧ್ಯಕ್ಷರಾದ ಮಡಿವಾಳಪ್ಪ ನಾಗರಹಳ್ಳಿ ಅವರು ವಹಿಸಿದ್ದರು.