ಜಿಮ್ಸ್ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೆ ಯತ್ನ: ಆರೋಪಿಗೆ ಶಿಕ್ಷೆ ವಿಧಿಸಲು ಆಗ್ರಹಿಸಿ ಪ್ರತಿಭಟನೆ

ಕಲಬುರಗಿ,ಜೂ.10:ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ ಕಾರ್ಯಕರ್ತರು ಗುರುವಾರ ಆನ್‍ಲೈನ್ ಮೂಲಕ ಪ್ರತಿಭಟನಾ ಪ್ರದರ್ಶನ ಮಾಡಿದರು.
ಜೀವ ರಕ್ಷಿಸಬೇಕಾದ ಆಸ್ಪತ್ರೆಗಳಲ್ಲಿಯೇ ವಿಕೃತ ಕಾಮಪಿಪಾಸುಗಳು ರೋಗಪೀಡಿತ ಮಹಿಳೆಯರ ಪಾಲಿಗೆ ತೋಳಗಳ ಹಾಗೆ ದಾಳಿ ಮಾಡಲು ಅವಕಾಶವಿರುವುದು ಆಘಾತಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಪ್ರತಿಭಟನೆಕಾರರು, ಕೂಡಲೇ ಕೃತ್ಯ ಎಸಗಿರುವವರಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಸುಸಂಸ್ಕøತ ದೇಶ ಎಂದು ಹೇಳಿಕೊಳ್ಳುತ್ತಿರುವ ಸರ್ಕಾರಗಳ ಬೇಜವಾಬ್ದಾರಿತನದಿಂದಲೇ ಇಂತಹ ಘಟನೆಗಳು ನಡೆಯಲು ಸಾಧ್ಯವಾಗುತ್ತಿವೆ. ಈ ಘಟನೆಯಿಂದ ಪ್ರಜ್ಞಾವಂತ ಜನರು ತಲೆ ತಗ್ಗಿಸುವಂತಾಗಿದೆ. ರೋಗಿಗಳ ರಕ್ಷಣೆಗೂ ಸಾಧ್ಯವಾಗದೇ ಇರುವ ಆಡಳಿತ ವ್ಯವಸ್ಥೆಯ ವೈಫಲ್ಯದಿಂದಾಗಿ ಅದೆಷ್ಟೋ ರೋಗಿಗಳು ನೋವನ್ನು, ಇನ್ನು ಕೆಲವರು ಸಾವನ್ನು ಅನುಭವಿಸುವಂತಹ ದು:ಖಕರ ಘಟನೆಗಳೂ ನಡೆಯುತ್ತಲೇ ಇವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇಂತಹ ಘಟನೆಗಳು ದೇಶಾದ್ಯಂತ ಹೆಚ್ಚಾಗುತ್ತಿರುವುದಕ್ಕೆ ಅಶ್ಲೀಲ ಸಿನೇಮಾ, ಸಾಹಿತ್ಯಗಳ ಅನಿಯಂತ್ರಿತ ಪ್ರಸಾರ ಹಾಗೂ ಅಪರಾಧಿಗಳನ್ನು ಶಿಕ್ಷಿಸದೇ ಇರುವುದು ಕಾರಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ್ ಹಾಗೂ ಜಿಲ್ಲಾ ಕಾರ್ಯದರ್ಶಿ ಗೌರಮ್ಮ ಸಿ.ಕೆ. ಅವರ ನೇತೃತ್ವದಲ್ಲಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.